ಕಾಂಗ್ರೆಸ್ ಅಭ್ಯರ್ಥಿಯನ್ನು ಕಾಂಗ್ರೆಸ್ಸಿಗರೇ ಸೋಲಿಸಿದ ಇತಿಹಾಸ ಮರುಕಳಿಸಲಿದೆ : ಎಚ್.ಡಿ.ಕೆ
.jpeg)
ಬೆಂಗಳೂರು.ಮೇ.30: ಕಾಂಗ್ರೆಸ್ ಅಭ್ಯರ್ಥಿಯನ್ನು ಕಾಂಗ್ರೆಸ್ಸಿಗರೇ ಸೋಲಿಸಿದ 2012 ರ ವಿಧಾನಪರಿಷತ್ ಚುನಾವಣೆಯ ಇತಿಹಾಸ ಈ ಬಾರಿ ರಾಜ್ಯ ಸಭಾ ಚುನಾವಣೆಯಲ್ಲಿ ಮರುಕಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿರುವ ಪಕ್ಷದ ಭಿನ್ನಮತೀಯರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಕಾಲ ಹತ್ತಿರವಾಗುತ್ತಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಆತ್ಮಸಾಕ್ಷಿ ಮತ ನೀಡಲಿ ಎಂದು ಮನವಿ ಮಾಡಿಕೊಂಡರು.
ಜೆಡಿಎಸ್ ಶಾಸಕಾಂಗ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕ ಡ್ಯಾನಿಶ್ ಆಲಿಯಿಂದ ಕರ್ನಾಟಕಕ್ಕೆ ಏನೂ ಲಾಭವಾಗಿಲ್ಲ. ಹೀಗಾಗಿ ಟಿಕೇಟ್ ನೀಡಿಲ್ಲ ಎಂದು ನೇರವಾಗಿ ಹೇಳಿದರು.
ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಪಕ್ಷದ ಶಾಸಕ ಜಮೀರ್ ಅಹ್ಮದ್ ಹೇಳಿರುವುದು ನನ್ನ ಗಮನಕ್ಕೆ ಬಂದಿದೆ. ಚುನಾವಣೆ ಇನ್ನೇನು ಸಧ್ಯದಲ್ಲೇ ನಡೆಯಲಿದೆ. ಹೀಗಾಗಿ ಅವರು ಏನು ಹೆಜ್ಜೆ ಇಡುತ್ತಾರೋ? ಗಮನಿಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.
ಅವರ ವಿರುದ್ಧ ಕ್ರಮ ಕೈಗೊಳ್ಳುವ ದಿನಗಳು ಹತ್ತಿರ ಬಂದಿವೆ ಎಂದ ಅವರು,ಈ ವಿಷಯ ಇತ್ಯರ್ಥವಾಗಲು ತುಂಬ ದಿನಗಳೇನೂ ಬೇಕಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರ ನೀಡಿದರು.
ಈ ಹಿಂದೆ ಇಂದಿರಾಗಾಂಧಿಯವರೂ ಇಂತಹ ಆತ್ಮಸಾಕ್ಷಿ ಮತಗಳನ್ನು ಕೋರಿದ ಇತಿಹಾಸವಿದೆ ಎಂದ ಅವರು,2012 ರ ವಿಧಾನಪರಿಷತ್ ಚುನಾವಣೆಯಲ್ಲಿ ಏನು ಬೆಳವಣಿಗೆಯಾಗಿತ್ತೋ?ಆ ಇತಿಹಾಸ ಮರುಕಳಿಕೆಯಾಗಲಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಟಿಕೇಟ್ ನೀಡದಿದ್ದರೆ ತಮ್ಮ ಮುಂದಿನ ದಾರಿಯನ್ನು ನಿರ್ಧರಿಸುವುದಾಗಿ ಹಿರಿಯ ನಾಯಕ ಡ್ಯಾನಿಶ್ ಅಲಿ ಹೇಳಿರುವುದು ಅವರ ವೈಯಕ್ತಿಕ ಹೇಳಿಕೆ.ಅವರಿಂದ ಕರ್ನಾಟಕದಲ್ಲಿ ಪಕ್ಷಕ್ಕೇನೂ ಲಾಭವಾಗಿಲ್ಲ.ಮಾಜಿ ಪ್ರಧಾನಿ ದೇವೇಗೌಡರ ಜತೆ ಅವರಿಗೆ ವಿಶ್ವಾಸವಿದೆಯೇ ಹೊರತು ಜೆಡಿಎಸ್ ಶಾಸಕಾಂಗದ ಜತೆಗಲ್ಲ ಎಂದರು.
ಭಾನುವಾರ ಡ್ಯಾನಿಶ್ ಆಲಿಯವರು ಕಮ್ಯೂನಿಸ್ಟ್ ನಾಯಕ ಸೀತಾರಾಂ ಯೆಚೂರಿ ಅವರ ಮೂಲಕ ದೂರವಾಣಿ ಕರೆ ಮಾಡಿಸಿ,ಡ್ಯಾನಿಶ್ ಅಲಿಯವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಸಿದ್ದರು.
ಆದರೆ ಸೀತಾರಾಂ ಯೆಚೂರಿಯವರಿಂದ ಫೋನು ಮಾಡಿಸಿದರೆ ಸಾಲುವುದಿಲ್ಲ.ಬದಲಿಗೆ ಕಾಂಗ್ರೆಸ್ ವರಿಷ್ಟರಿಂದ ಫೋನು ಮಾಡಿಸಿ ಎಂದು ಹೇಳಿದ್ದೆ.ಆದರೆ ಇದುವರೆಗೆ ಯಾರೂ ನನಗೆ ಫೋನು ಮಾಡಿಲ್ಲ ಎಂದು ಹೇಳಿದರು.
ಪಕ್ಷದ ವತಿಯಿಂದ ರಾಜ್ಯಸಭೆ ಚುನಾವಣೆಗೆ ಫಾರೂಕ್ ಅವರನ್ನು ಕಣಕ್ಕಿಳಿಸಿದ್ದು ಅದೇ ರೀತಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಮೊದಲ ಅಭ್ಯರ್ಥಿಯಾಗಿ ನಾರಾಯಣಸ್ವಾಮಿ ಹಾಗೂ ಎರಡನೇ ಅಭ್ಯರ್ಥಿಯಾಗಿ ಡಾ॥ ವೆಂಕಟಪತಿ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದರು.
ಎರಡನೇ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿಕೊಂಡಿದ್ದು ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಾವು ಅವರ ಅಭ್ಯರ್ಥಿಗೆ ಬೆಂಬಲ ನೀಡಿದ್ದೆವು.ಈಗ ಅವರು ನಮಗೆ ಬೆಂಬಲ ನೀಡಲಿ ಎಂದರು.
ಹೀಗೆ ಬಿಜೆಪಿ ನೆರವಿನಿಂದ ಎರಡನೇ ಅಭ್ಯರ್ಥಿಯನ್ನು ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದಾಗಿ ನುಡಿದ ಅವರು,ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ನಾವೇನು ಅಂದುಕೊಂಡಿದ್ದೇವೋ ಅದನ್ನು ಸಾಧಿಸುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.







