ತಿರುವನಂತಪುರದಲ್ಲಿ ಪೊಲೀಸ್ ಬಲೆಗೆ ಬಿದ್ದ ಆನ್‌ಲೈನ್ ವೇಶ್ಯಾವಾಟಿಕೆ ಜಾಲ

ತಿರುವನಂತಪುರಂ, ಮೇ 30: ತಿರುವನಂತಪುರದಲ್ಲಿ ಇತ್ತೀಚೆಗೆ ಬಂಧಿಸಲಾದ ಆನ್‌ಲೈನ್ ವೇಶ್ಯವಾಟಿಕೆ ತಂಡದಿಂದ ಆಘಾತಕಾರಿ ಮಾಹಿತಿ ದೊರಕಿದ್ದು ಜನರು ಕಡಿಮೆಯಿರುವ ಸ್ಥಳದಲ್ಲಿ ವಹಿವಾಟು ನಡೆಸುತ್ತಿದ್ದ ತಂಡ ಈಗ ಜನರು ತುಂಬಿ ತುಳುಕುವ ಸ್ಥಳಗಳಲ್ಲಿ ವೇಶ್ಯಾವಾಟಿಕೆ ಅಡ್ಡೆಗಳನ್ನು ತೆರೆದು ಕಾರ್ಯಾಚರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಾವು ಕಾರ್ಯಾಚರಿಸಲು ಗುರುತಿಸಿದ ಮನೆಗಳನ್ನೂ ಅದರ ಸಮೀಪದ ಮನೆಗಳನ್ನು ಬಾಡಿಗೆಗೆ ಪಡೆದು ಸಿಸಿಕ್ಯಾಮರಾ ಅಳವಡಿಸಿ ಇವರು ಪೊಲೀಸರನ್ನು ಯಾಮಾರಿಸುತ್ತಿದ್ದರು. ಗೀತಾ ಎಂಬ ಮಹಿಳೆ ಮುಖ್ಯಸ್ಥೆಯಾದ ಆನ್‌ಲೈನ್ ವೇಶ್ಯಾವಾಟಿಕಾ ಜಾಲವನ್ನುಭಾರೀ ಆಮಿಶವೊಡ್ಡಿ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನ್‌ಲೈನ್ ವೇಶ್ಯಾವಾಟಿಕಾ ಜಾಲವನ್ನು ಭೇದಿಸಲು ಪೊಲೀಸರು ಬಲೆಬೀಸಿ ಕಾಯುತ್ತಿದ್ದಾರೆಂದು ಈ ತಂಡಕ್ಕೆ ಅರಿವಿದ್ದಿದ್ದರಿಂದ ಭಾರೀ ಎಚ್ಚರಿಕೆಯಿಂದ ಅದು ಕಾರ್ಯಾಚರಿಸುತ್ತಿತ್ತು. ಈ ತಂಡ ವೇಶ್ಯವಾಟಿಕೆಯನ್ನು ಮನೆಯಲ್ಲಿ ನಡೆಸಿದರೂ ಪ್ಲಾಟ್‌ಗಳಲ್ಲಿ ನಡೆಸುವುದಿದ್ದರೂ ಹತ್ತಿರದ ಮನೆಗಳನ್ನು ಹಾಗೂ ಪ್ಲಾಟ್‌ಗಳನ್ನು ಇವರು ಬಾಡಿಗೆ ಪಡೆದು ಸಿಸಿ ಕ್ಯಾಮರಾ ಅಳವಡಿಸಿ ಬಹಳ ಜಾಗರೂಕತೆಯಿಂದ ವರ್ತಿಸುತ್ತಿದ್ದರು. ಸಿಸಿ ಟಿವಿಯಲ್ಲಿ ಪೊಲೀಸರ ಚಲನವಲನ ಮತ್ತು ಗಿರಾಕಿಗಳ ಚಲನವಲನಗಳ ಬಗ್ಗೆ ನಿಗಾವಿರಿಸಿ ಮುಂದುವರಿಯುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂಧಿಸಿದ ಈ ಜಾಲದ ಪ್ರಧಾನ ಮಧ್ಯವರ್ತಿ ಗೀತಾಳಮನೆಯ ಸುತ್ತಲೂ ಸಿಸಿಕ್ಯಾಮರಾ ಹಾಕಿ ನಿಗಾವಿರಿಸಲಾಗಿತ್ತು. ಪೊಲೀಸರು ಗಿರಾಕಿಗಳಂತೆ ವರ್ತಿಸಿ ಲಕ್ಷಾಂತರ ರೂಪಾಯಿಗೆ ವಹಿವಾಟು ಕುದುರಿಸಿದಾಗ ವೇಶ್ಯಾವಾಟಿಕೆ ಜಾಲ ಮೋಸಹೋದುದು ಜಾಲವನ್ನು ಭೇದಿಸಲು ಸುಲಭವಾಯಿತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆಟ್ಟಿಂಗಲ್‌ನ ಸಾಜನ್ ಎಂಬಾತ ವೇಶ್ಯಾವಾಟಿಕಾ ಜಾಲದ ಇನ್ನೋರ್ವ ಪ್ರಧಾನ ಸೂತ್ರಧಾರಿ ಎನ್ನಲಾಗಿದೆ. ಊರಲ್ಲಿ ಹಲವು ಏನೇನೋ ಕಾರ್ಯಕ್ರಮಗಳಲ್ಲಿ ಸುತ್ತಾಡುತ್ತಿದ್ದ ಈತ ಗಲ್ಫ್‌ಗೆ ಹೋದ ಬಳಿಕ ವೇಶ್ಯಾವಾಟಿಕೆಯನ್ನು ನಿರ್ವಹಿಸುವ ಹಂತಕ್ಕೆ ಬೆಳೆದಿದ್ದ. ಊರಿನ ಏಜೆಂಟ್‌ಗಳ ಮೂಲಕ ಸಿಗುವ ಹುಡುಗಿಯರ ಫೋಟೊ ಮತ್ತು ವೀಡಿಯೊಗಳನ್ನು ಗಲ್ಫ್ ಇಂಟರ್‌ನೆಟ್ ಅಕೌಂಟ್ ಮೂಲಕ ವೆಬ್‌ಸೈಟ್‌ಗೆ ಈತ ಅಪ್‌ಲೋಡ್ ಮಾಡುತ್ತಿದ್ದ.
ಈತನಿಗೆ ಪತ್ನಿಯ ಸಂಬಂಧಿಯೊಬ್ಬ ನೆರವು ನೀಡುತ್ತಿದ್ದನೆನ್ನಲಾಗಿದೆ. ತಿರುವನಂತಪುರಂ ಮೆಡಿಕಲ್ ಕಾಲೇಜ್ ಸಮೀಪ ದೂರ ಶಿಕ್ಷಣ ಸೆಂಟರ್ ನಡೆಸುತ್ತಿದ್ದ ಈ ಪ್ರಕರಣದ ಹತ್ತನೆ ಆರೋಪಿಯೊಬ್ಬ ಅಲ್ಲಿಗೆ ಬರುತ್ತಿದ್ದ ಹೆಮ್ಮಕ್ಕಳ ಫೋಟೊಗಳನ್ನು ದುರ್ಬಳಕೆ ಮಾಡಿದ್ದಾನೆ. ಈತನಿಗೆ ಜಾಹೀರಾತುಗಳ ಏಜೆನ್ಸಿ ಇದ್ದು ಅದರ ಮೂಲಕ ಎಷ್ಟು ಹೆಮ್ಮಕ್ಕಳನ್ನು ಸಂಚಿನಲ್ಲಿ ಸಿಲುಕಿಸಿದ್ದಾನೆ ಎಂದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
ಹೆಮ್ಮಕ್ಕಳ ಸಹವಾಸಕ್ಕೆ ಲಕ್ಷಾಂತರ ಖರ್ಚಿಗೆ ಸಿದ್ಧವಾಗುತ್ತಿದ್ದವರಿಗೆ ಇವರು ಬಲೆ ಬೀಸುತ್ತಿದ್ದರು. ಇಲ್ಲಿಗೆ ಬಂದವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಿಕ್ಕಾಗಿ ಲಕ್ಷುರಿ ಕಾರುಗಳನ್ನು ವೇಶ್ಯವಾಟಿಕೆ ತಂಡ ಹೊಂದಿತ್ತು. ತಂಡದ ಬಳಿ ಇದ್ದ ಇಂತಹ ಐದು ಕಾರುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇವುಗಳಿಗೆ ಕೆಲವು ಬಾಡಿಗೆಗೆ ಪಡೆದ ಕಾರುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಕಿಸ್‌ಆಫ್ ಕುಖ್ಯಾತಿಯ ರಾಹುಲ್ ಪಶುಪಾಲನ್ ಎಂಬಾತನನ್ನು ಇನ್ನೊಂದು ವೇಶ್ಯಾವಾಟಿಕೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು.







