ಮೌಲ್ಯಾಧಾರಿತ ಶಿಕ್ಷಣ ನೀಡಲು ಸರಕಾರಿ ಶಾಲೆಗಳಿಂದ ಮಾತ್ರ ಸಾಧ್ಯ: ಸಂಸದ ನಳಿನ್
.jpg)
ಸುರತ್ಕಲ್, ಮೇ 30: ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರಯುತ ಜೀವನ ರೂಪಿಸಲು ಸರಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಧ್ಯದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಆರಂಭೋತ್ಸವ ಮತ್ತು ಎಲ್‌ಕೆಜಿ, ಯುಕೆಜಿ, 1ನೆ ತರಗತಿ ಹಾಗೂ 8 ನೆ ತರಗತಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಧ್ಯ ಸರಕಾರಿ ಶಾಲೆಯಾಗಿದ್ದರೂ ಪ್ರಯೋಗ ಶೀಲತೆಯನ್ನು ಅಳವಡಿಸಿಕೊಂಡು ಇ- ಸ್ಮಾರ್ಟ್ ತರಗತಿಯನ್ನು ತೆರೆದು ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ಮಧ್ಯ ಶಾಲೆ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ದಾನಿ ಉದ್ಯಮಿ ಮೋಹನ್ ಚೌಟ, ಮತ್ತು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜರನ್ನು ಸನ್ಮನಿಸಲಾಯಿತು. ಅಲ್ಲದೆ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕಗಳನ್ನು ಅತಿಥಿಗಳು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ವಹಿಸಿದ್ದರು. ತಾ. ಪಂಚಾಯತ್ ಸದಸ್ಯೆ ವಜ್ರಾಕ್ಷಿ ಪಿ. ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್, ಶಿಕ್ಷಣ ಇಲಾಖೆಯ ವಾಲ್ಟರ್ ಡಿಮೆಲ್ಲೋ, ಕರುಣಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಡಯಟ್ ಉಪನ್ಯಾಸಕಿ ದಯಾವತಿ, ಸರ್ವ ಶಿಕ್ಷಣ ಸಮನ್ವಯಾಧಿಕಾರಿ ಗೀತಾ, ಪೀತಾಂಬರ, ರೋಟರಿಯ ಡಾ. ಐರೂನ್, ಕೃಷ್ಣ ಮೂರ್ತಿ, ಡಿಎಂಸಿಯ ಮನೋರಮಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದರು, ರಾಜ್ಯದ ಮುಖ್ಯಮಂತ್ರಿ ಮತ್ತು ಜಿಲ್ಲೆಯ ಉಸ್ತವಾರಿ ಸಚಿವರು ನಿದ್ದೆಗೆ ಜಾರಿದ್ದಾರೆ. ಕೇಂದ್ರ ನೀಡುತ್ತಿರುವ ಯಾವುದೇ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಲು ಮುಂದಾಗುತ್ತಿಲ್ಲ. ಮಂಗಳೂರು ವಿಮಾನ ನಿಲ್ದಾಣ ಮೇಲ್ದರ್ಜೆಗೆ ಕೇಂದ್ರ 1,500 ಕೋಟಿ ರೂ. ಅನುದಾನ ನೀಡಿದ್ದರೂ ರಾಜ್ಯ ಸರಕಾರ ನಿಲ್ದಾಣಕ್ಕೆ ಬೇಕಾಗುವ 80 ಎಕರೆ ನಿವೇಶನ ಕಲ್ಪಿಸುತ್ತಿಲ್ಲ. ವಿಶ್ವ ಮಟ್ಟದ ರೈಲ್ವೆ ಕಾಮಗಾರಿಗೆ ಮುಂದಾಗುತ್ತಿಲ್ಲ ಎಂದರು.
ಮಂಗಳೂರು ಬಂದರು ಖಾಸಗೀಕರಣ
ನವಮಂಗಳೂರು ಬಂದರನ್ನು ಅದಾನಿ ಕಂಪೆನಿಗೆ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರಶ್ನಿಸಿದ ಸಂಸದರು, ಯಾವುದೇ ಕಾರಣಕ್ಕೂ ಬಂದರನ್ನು ಖಾಸಗಿ ಕಂಪೆನಿಗಳಿಗೆ ನೀಡುವುದಿಲ್ಲ. ಅಂತಹ ಪ್ರಸ್ತಾಪವೇ ನಡೆದಿಲ್ಲ. ಆರೋಪ, ಟೀಕೆ ಮಾಡುವ ಸಚಿವರು ಅಧ್ಯಯನ ಮಾಡಿ ಬಳಿಕ ಆರೋಪ ಮಾಡುವುದು ಉತ್ತಮ ಎಂದರು.
ನನೆಗುದಿಗೆ ಬಿದ್ದ ಹಳೆಯಂಗಡಿ ರೈಲ್ವೆ ಮೇಲ್ಸೇತುವೆ
ಕಿನ್ನಿಗೋಳಿ, ಕಟೀಲು ಭಾಗದ ಜನತೆಯ ಬಹುದಿನಗಳ ನಿರೀಕ್ಷೆಯ ಹಳೆಯಂಗಡಿ ರೈಲು ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಈವರೆಗೂ ಆರಂಭವಾಗದಿರುವ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ನಳಿನ್, ಕೇಂದ್ರ ಸರಕಾರದ ಯಾವುದೇ ಇಲಾಖೆಗಳ ಕೆಲಸಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು 50:50 ಅನುಪಾತದಲ್ಲಿ ಅನುದಾನಗಳನ್ನು ವಿನಿಯೋಗಿಸಬೇಕಿದೆ. ಆದರೆ, ಹಳೆಯಂಗಡಿ ರೈಲು ಮಾರ್ಗದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಈಗಾಗಲೆ ಒಪ್ಪಿಗೆ ಸೂಚಿಸಿದ್ದು, ರಾಜ್ಯ ಸರಕಾರ ಜಮೀನು ಕಲ್ಪಿಸಿದಲ್ಲಿ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.







