ಭ್ರಷ್ಟಾಚಾರವನ್ನು ತೊಡೆದುಹಾಕಲು ಮಾಧ್ಯಮಗಳು ಪ್ರಮುಖ ಪಾತ್ರವಹಿಸಬೇಕು: ಎನ್. ಸಂತೋಷ್ ಹೆಗ್ಡೆ

ಮಂಗಳೂರು, ಮೇ 30:ಕರ್ನಾಟಕ ರಾಜ್ಯವೊಂದರ ಬಜೆಟ್‌ಗಿಂತ ಹೆಚ್ಚಿನ ಹಣದ ಭ್ರಷ್ಟಾಚಾರ ನಮ್ಮ ದೇಶದಲ್ಲಿ ನಡೆಯುತ್ತಿದ್ದು , ದೇಶದಲ್ಲಿ ಭ್ರಷ್ಠಾಚಾರವನ್ನು ತೊಡೆದುಹಾಕಲು ಪತ್ರಿಕಾ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಸ್ಪಾರ್‌ಹೆಡ್ ಮೀಡಿಯ ಪ್ರೈ ಲಿಮಿಟೆಡ್‌ನ ನ್ಯೂಸ್ ಕರ್ನಾಟಕ ಡಾಟ್ ಕಾಮ್‌ನ ನಾಲ್ಕನೆ ವಾರ್ಷಿಕ ಸಂಭ್ರಮದಲ್ಲಿ ನಗರದ ಕದ್ರಿಯಲ್ಲಿ ಆರಂಭಿಸಲಾಗಿರುವ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಹಗರಣಗಳ ಸರಮಾಲೆಯೇ ಕಾಣಿಸುತ್ತಿದೆ. ಬೋಪೋರ್ಸ್ ಹಗರಣದಲ್ಲಿ 64 ಕೋಟಿ, ಕಾಮನ್‌ವೆಲ್ತ್ ಹಗರಣದಲ್ಲಿ 17 ಸಾವಿರ ಕೋಟಿ ರೂ., 2ಜಿ ಹಗರಣದಲ್ಲಿ 1.76 ಕೋಟಿ ರೂ. ಹಣ ದುರುಪಯೋಗವಾಗಿ ದೇಶದ ಬೊಕ್ಕಸಕ್ಕೆ ನಷ್ಟವಾಗಿದೆ. ಇಂತಹ ಹಗರಣಗಳು ಆಗದಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕಾಗಿದೆ. ಈ ರೀತಿಯ ಪರಿಸ್ಥಿತಿಯನ್ನು ತರಲು ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಸಂವಿಧಾನದ ನಾಲ್ಕನೆ ಅಂಗವಾದ ಮಾಧ್ಯಮದಲ್ಲಿಯೂ ಹಗರಣಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಪೆಯ್ಡ ಮೀಡಿಯಗಳು ಮಾಧ್ಯಮಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿದೆ. ಇವುಗಳು ಬದಲಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೆಜರ್ ಡಾ.ಮೀರಾ ಎಲ್. ಬಿ. ಅರನ್ಹಾ, ಅಕ್ಷರಸಂತ ಹರೇಕಳ ಹಾಜಬ್ಬ, ಉದ್ಯಮಿ ಕ್ಲೇವಿ ಲಿಯೋ ರೋಡ್ರಿಗಸ್, ಕೇಮಾರ್ ಮಠಾಧಿಪತಿ ಈಶ ವಿಠಲದಾಸ ಸ್ವಾಮೀಜಿ, ಅಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲ ಫಾ. ಫ್ರಾನ್ಸಿಸ್ ಡಿ ಆಲ್ಮೇಡ ಎಸ್.ಜೆ, ಝೀನತ್ ಬಕ್ಷ್ ಕೇಂದ್ರದ ಸದಕತುಲ್ಲಾ ಫೈಝಿ ಖತೀಬ್ ಉಪಸ್ಥಿತರಿದ್ದರು.







