ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಲ್ಲಾ ಮಟ್ಟದ ಸಮಿತಿಗೆ ಪ್ರಸ್ತಾವನೆ: ಮೇಯರ್

ಮಂಗಳೂರು, ಮೇ 30: ನಗರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ, ಮುಂದಿನ ವರ್ಷಗಳಲ್ಲಿ ಈ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಮಟ್ಟದ ಸಮಿತಿ ರೂಪಿಸಲು ಮನಪಾ ಆಯುಕ್ತರು ಜಿಲ್ಲಾಧಿಕಾರಿಗೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದ್ದಾರೆ ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ಸೋಮವಾರ ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆಯೇ, ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಕುಡಿಯುವ ನೀರಿನ ಸಮಸ್ಯೆ ಕುರಿತಾದ ಚರ್ಚೆಯ ವೇಳೆ ಮೇಯರ್ ಈ ವಿಷಯ ತಿಳಿಸಿದರು.
ನಗರದಲ್ಲಿ ಈ ವರ್ಷ ತಲೆದೋರಿದ್ದ ನೀರಿನ ಸಮಸ್ಯೆಯನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಾವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಸದಸ್ಯರಾದ ದಯಾನಂದ ಶೆಟ್ಟಿ, ದೀಪಕ್ ಪೂಜಾರಿ, ಮಹಾಬಲ ಮಾರ್ಲ ಮೊದಲಾದವರು ಆಗ್ರಹಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ಹರಿನಾಥ್, ನಗರದಲ್ಲಿ ಉಂಟಾಗಿದ್ದ ನೀರಿನ ಸಮಸ್ಯೆ ನಿರ್ವಹಿಸುವಲ್ಲಿ ಜಿಲ್ಲಾಡಳಿತ, ಆಡಳಿತ ವರ್ಗ, ಗುತ್ತಿಗೆದಾರರು, ಬಿಲ್ಡರ್‌ಗಳು ಸಹಕರಿಸುವ ಜತೆಗೆ ಸಾರ್ವಜನಿಕರು ಕೂಡಾ ತಾಳ್ಮೆಯಿಂದ ನಗರ ಪಾಲಿಕೆ ಜತೆ ಕೈಜೋಡಿಸಿದ್ದಾಗಿ ಕೃತಜ್ಞತೆ ಸಲ್ಲಿಸಿದರು. ಸದಸ್ಯ ಮಹಾಬಲ ಮಾರ್ಲ ಮಾತನಾಡಿ, ನೀರಿನ ಸಮಸ್ಯೆ ಸಂದರ್ಭ ಎಲ್ಲಾ ವಾರ್ಡ್‌ಗಳ ವಾಲ್‌ಮನ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಾಲ್‌ಮನ್‌ಗಳನ್ನು ಖಾಯಂಗೊಳಿಸುವಂತೆ ಸರಕಾರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿದರು.
ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ವಾಲ್‌ಮೆನ್‌ಗಳ ವೇತನವನ್ನು ಹೆಚ್ಚಿಸಬೇಕೆಂದು ಸದಸ್ಯ ದಯಾನಂದ ಶೆಟ್ಟಿ ಒತ್ತಾಯಿಸಿದರು. ಮುಂದಿನ ಒಂದೆರಡು ತಿಂಗಳಲ್ಲಿ ವೇತನ ಹೆಚ್ಚಳ ಆಗಲಿದೆ ಎಂದು ಈ ಸಂದರ್ಭ ಮೇಯರ್ ಹರಿನಾಥ್ ಹೇಳಿದರು.
ಷರತ್ತು ಉಲ್ಲಂಘಿಸಿದರೆ ವ್ಯಾಪಾರ ಪರವಾನಿಗೆ, ತಾತ್ಕಾಲಿಕ ಮನೆ ನಂಬ್ರ ರದ್ದು
ನಗರದಲ್ಲಿ ಹಲವು ಕಡೆಗಳಲ್ಲಿ ಮಳೆ ನೀರು ಕೊಯ್ಲು ಸೇರಿದಂತೆ ಕಟ್ಟಡ ಪರವಾನಿಗೆಯ ಷರತ್ತುಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿ ತೆರಿಗೆ ವಂಚಿಸಲಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಸದಸ್ಯ ವಿನಯ ರಾಜ್ ಸಭೆಯಲ್ಲಿ ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಕಟ್ಟಡ ಪರವಾನಿಗೆ ಷರತ್ತು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಲ್ಲದೆ, ಅಂಥಹವರ ವ್ಯಾಪಾರ ಪರವಾನಿಗೆ ಮತ್ತು ತಾತ್ಕಾಲಿಕ ಮನೆ ನಂಬ್ರವನ್ನು ರದುಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬಜಾಲ್ ರೈಲ್ವೇ ಕ್ರಾಸಿಂಗ್ ರಸ್ತೆ ಕಾಮಗಾರಿ ವಿಳಂಬ: ಆಕ್ಷೇಪ
ಬಜಾಲ್ ರೈಲ್ವೇ ಕ್ರಾಸಿಂಗ್ ರಸ್ತೆ ಕಾಮಗಾರಿ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಬೇಕಾದೀತು ಎಂದು ಸದಸ್ಯ ಅಬ್ದುಲ್ಲತೀಫ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾನರ್, ಫ್ಲೆಕ್ಸ್‌ಗಳಿಗೆ ಬಾಧಿಸದ ಪ್ಲಾಸ್ಟಿಕ್ ನಿಷೇಧ ಆದೇಶ
ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದರೂ, ವಾರ್ಡ್‌ಗಳೆಲ್ಲಾ ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಯಾವುದೇ ಕ್ರಮವಾಗುತ್ತಿಲ್ಲ ಎಂದು ಸಭೆಯಲ್ಲಿ ರಮೀಝಾ ಬಾನು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಿಲತಾ, ಲ್ಯಾನ್ಸಿಲೋಟ್ ಪಿಂಟೋ, ಕವಿತಾ ಉಪಸ್ಥಿತರಿದ್ದರು.
ಆ್ಯಂಟನಿ ವೇಸ್ಟ್ ಕಂಪನಿ ಅಕ್ರಮ ಆರೋಪದ ಬಗ್ಗೆ ತನಿಖೆಗೆ ಸೂಚನೆ
ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಕಂಪನಿ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಕಳೆದ ಸಭೆಯಲ್ಲಿ ಸಾಕ್ಷ ಸಮೇತ ವಿವರ ನೀಡಿದ್ದೆ. ಕಂಪನಿ ಜತೆಗಿನ ಮಾಡಲಾದ ಕರಾರು ಪತ್ರದಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಬದಲು ಆಯುಕ್ತರು ಸಮಜಾಯಿಷಿ ನೀಡಿ ದೂರು ಹಿಂಪಡೆಯುವಂತೆ ತಮಗೆ ಪತ್ರ ಬರೆದಿದ್ದಾರೆ ಎಂದು ಸದಸ್ಯ ಅಬ್ದುಲ್ ಅಝೀಝ್ ಕುದ್ರೋಳಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರು ಪ್ರಸ್ತಾಪಿಸಿರುವ ಎಲ್ಲಾ ಅಂಶಗಳನ್ನು ಗಮನಿಸಲಾಗಿದ್ದು, ಅವರಿಗೆ ವಿಧಿಸಲಾಗಿರುವ ದಂಡ, ಕಡಿತದ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದು ಆಯುಕ್ತರ ಉತ್ತರದಿಂದ ತೃಪ್ತರಾಗದ ಅಝೀಝ್ ಕುದ್ರೋಳಿ, ಹಾಗಾದರೆ ಎಲ್ಲಾ ಸರಿ ಇದೆ ಎಂಬ ಕಾರಣಕ್ಕೆ ದೂರು ಹಿಂಪಡೆಯಲು ತಿಳಿಸಿರುವುದೇ ಎಂದು ಪ್ರಶ್ನಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ಹರಿನಾಥ್, ಈ ಬಗ್ಗೆ ಸಮರ್ಪಕವಾಗಿ ತನಿಖೆ ಮಾಡಿ ಮುಂದಿನ ಸಭೆಗೆ ವಿವರ ನೀಡುವಂತೆ ಆಯುಕ್ತರಿಗೆ ಸೂಚಿಸಿದರು.







