ವಿಪಕ್ಷ ಪ್ರತಿಭಟನೆಯ ಮಧ್ಯೆ ನಡೆದ ಸಾಮಾನ್ಯ ಸಭೆ: ಸದನದೊಳಗೆ ಪೊಲೀಸರ ಪ್ರವೇಶ!

ಮಂಗಳೂರು, ಮೇ 30: ಪ್ರವೇಶ ದ್ವಾರದಲ್ಲಿ ವಿಪಕ್ಷ ಸದಸ್ಯರ ಪ್ರತಿಭಟನೆ, ಧಿಕ್ಕಾರ, ಘೋಷಣೆಗಳ ನಡುವೆಯೇ ಆಡಳಿತ ಪಕ್ಷದಿಂದ ಸಾಮಾನ್ಯ ಸಭೆಗೆ ಮಂಗಳೂರು ಮಹಾನಗರ ಪಾಲಿಕೆಯ ‘ಮಂಗಳಾ’ ಸಭಾಂಗಣ ಸಾಕ್ಷಿಯಾಯಿತು. ಮಾತ್ರವಲ್ಲದೆ, ಸಭೆ ನಡೆಯುತ್ತಿದ್ದ ಸಂದರ್ಭ ಸದನದೊಳಗೆ ಪೊಲೀಸರ ಪ್ರವೇಶ ಕೆಲ ಕ್ಷಣ ಮುಜುಗರಕ್ಕೂ ಕಾರಣವಾಯಿತು.
ಮನಪಾ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರವರ ಪ್ರತಿಮೆ ಸ್ಥಾಪನೆ ವಿಚಾರವನ್ನು ಪ್ರಸ್ತಾಪಿಸುತ್ತಾ, ಈ ಬಗ್ಗೆ ಕಳೆದ ಸಭೆಯಲ್ಲಿ ವಿಪಕ್ಷದ ಆಕ್ಷೇಪದ ಹೊರತಾಗಿಯೂ ಸ್ಥಿರೀಕರಿಸಲಾಗಿತ್ತು. ಇತ್ತೀಚೆಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಆಕ್ಷೇಪಿಸಿದಾಗಲೂ ರಾಜಕಾರಣ ಮಾಡುತ್ತಿದ್ದೇವೆ ಎಂದು ಅವಮಾನಿಸಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಉಸ್ತುವಾರಿ ಸಚಿವರ ಸಭೆಯಲ್ಲಿ ಪಿ.ವಿ. ಮೋಹನ್ ಯಾಕೆ ಹಾಜರಾಗಿದ್ದರು ಎಂದು ರೂಪಾ ಡಿ. ಬಂಗೇರ ಸಭೆಯಲ್ಲಿ ಪ್ರಶ್ನಿಸಿದರು.
ಉಸ್ತುವಾರಿ ಸಚಿವರ ಸಭೆಯಲ್ಲಿ ಯಾರು ಭಾಗವಹಿಸಬೇಕೆಂಬುದು ನಿರ್ಧರಿಸುವುದು ಅವರಿಗೆ ಬಿಟ್ಟ ವಿಚಾರ. ಪ್ರತಿಮೆ ಸ್ಥಾಪನೆಯ ಕುರಿತಂತೆ ಪೂರ್ವಾನುಭಾವಿ ಪೂರ್ವಾನುಭವಾ ಮಂಜೂರಾತಿಗೆ ಒಪ್ಪಿಗೆ ನೀಡಿರುವ ವಿಪಕ್ಷ ಇದೀಗ ಆಕ್ಷೇಪಿಸುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯರು ಮಾತಿಗಿಳಿದರು. ಈ ಸಂದರ್ಭ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸುವ ಭರದಲ್ಲಿ ಮೇಯರ್‌ರವರು ಎದ್ದು ನಿಂತು ಜೋರು ಧ್ವನಿಯಲ್ಲಿ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು. ಈ ಸಂದರ್ಭ ವಿಪಕ್ಷ ಸದಸ್ಯರು ಮೇಯರ್ ತಮಗೆ ಅವಮಾನ ಮಾಡಿದರೆಂದು ಆರೋಪಿಸುತ್ತಾ, ಕ್ಷಮೆಯಾಚಿಸುವವರೆಗೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿ ಹೊರನಡೆದರು. ಈ ಸಂದರ್ಭ ಉಪ ಮೇಯರ್ ಸುಮಿತ್ರಾ ಕರಿಯಾ ಅವರೂ ಪೀಠದಿಂದಿಳಿದು ಹೊರನಡೆದರು.
ನಾನು ವಿಪಕ್ಷದವರಿಗೆ ಮಾತ್ರವಲ್ಲ, ಎಲ್ಲರಿಗೂ ಕುಳಿತುಕೊಳ್ಳುವಂತೆ ಹೇಳಿದ್ದು, ನಿಮಗೆ ಅದು ತಪ್ಪಾಗಿ ಕಂಡರೆ ನಿಮಗೆ ಖುಷಿ ಬಂದಂತೆ ಮಾಡಿ ಎಂದು ವಿಪಕ್ಷದ ಸಭಾತ್ಯಾಗಕ್ಕೆ ಮಣಿಯದೆ ಸಭೆ ಆರಂಭಿಸಲು ಮೇಯರ್ ಸೂಚಿಸಿದರು. ಇತ್ತ ಸಭೆ ನಡೆಯುತ್ತಿದ್ದಂತೆಯೇ ಅತ್ತ ಸಭಾಂಗಣದ ಪ್ರವೇಶ ದ್ವಾರದಲ್ಲಿ ಕುಳಿತು ವಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು.
ಸುಮಾರು ಒಂದೂವರೆ ಗಂಟೆಗಳ ಚರ್ಚೆಯ ವೇಳೆ ಸದಸ್ಯ ಮುಹಮ್ಮದ್ ಪ್ರತಿಭಟನೆಗೆ ಕುಳಿತಿರುವ ವಿಪಕ್ಷ ಸದಸ್ಯರನ್ನು ಕರೆಯುವಂತೆ ಮನವಿ ಮಾಡಿದರು. ಮೇಯರ್‌ರವರು ಮಾತನಾಡಿ, ನಾನು ಯಾರದ್ದೇ ಮನಸ್ಸಿಗೆ ನೋವಾಗಬೇಕೆಂಬ ಉದ್ದೇಶದಿಂದ ಮಾತನಾಡಿಲ್ಲ. ನನ್ನ ಧ್ವನಿಯೇ ಹಾಗೆ. ನಾನು ಎಲ್ಲಾ ಸದಸ್ಯರಿಗೆ ಕುಳಿತುಕೊಳ್ಳುವಂತೆ ಹೇಳಿದ್ದು. ವಿಪಕ್ಷದ ಸದಸ್ಯರೊಬ್ಬರು ಮನವಿ ಪತ್ರವೊಂದನ್ನು ನನ್ನ ಕೈಗೆ ಕೊಡುವುದನ್ನು ಬಿಟ್ಟು, ಬಿಸಾಡಿದ್ದಾರೆ. ಅವರು ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರಲ್ಲದೆ, ವಿಪಕ್ಷ ನಾಯಕರ ವರ್ತನೆಯೂ ಸರಿ ಇಲ್ಲ ಎಂದು ಹೇಳಿದರು.
ಇದು ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಅವರೆಲ್ಲಾ ಘೋಷಣೆಗಳನ್ನು ಕೂಗುತ್ತಾ ಸದನದೊಳಗೆ ಪ್ರವೇಶಿಸಿದರು. ಈ ಸಂದರ್ಭ ಇಬ್ಬರು ಪೊಲೀಸರು ಕೂಡಾ ಸದನದೊಳಗೆ ಪ್ರವೇಶಿಸಿದಾಗ ಸದಸ್ಯರಾದ ಅಬ್ದುಲ್ ಅಝೀಝ್, ದಯಾನಂದ ಶೆಟ್ಟಿ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣ ಪೊಲೀಸರು ಅಲ್ಲಿಂದ ಹೊರನಡೆದರು. ಮೇಯರ್‌ರವರು ವಿಪಕ್ಷ ಸದಸ್ಯರನ್ನು ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಕೋರಿಕೊಂಡರೂ ತೃಪ್ತರಾಗದ ಸದಸ್ಯರು ಮತ್ತೆ ಸಭೆಯಿಂದ ಹೊರನಡೆದು ಸಭೆ ಮುಗಿಯುವವರೆಗೂ ಪ್ರತಿಭಟನೆ ನಡೆಸಿದರು.
ಕಣ್ಣೀರು ಹಾಕಿದ ವಿಪಕ್ಷ ನಾಯಕಿ
ಸಭೆ ಮುಗಿದ ಬಳಿಕ ವಿಪಕ್ಷ ಸದಸ್ಯರೆಲ್ಲರೂ ಪ್ರತಿಭಟನೆ ಕೊನೆಗೊಳಿಸಿದರೂ ನಾಯಕಿ ರೂಪಾ ಡಿ. ಬಂಗೇರ ಮಾತ್ರ ಎದ್ದೇಳಲು ಕೇಳಲಿಲ್ಲ. ಮೇಯರ್‌ರವರು ತನ್ನ ವರ್ತನೆ ಸರಿ ಇಲ್ಲ ಎಂದು ಹೇಳಿದ್ದಾರೆ ಎನ್ನುತ್ತಾ ಭಾವುಕರಾದರು. ಆಗ ಇತರ ಸದಸ್ಯರು ಅವರನ್ನು ಸಮಾಧಾನಪಡಿಸಿದ ಪ್ರಸಂಗವೂ ನಡೆಯಿತು.







