ನೀಟ್ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ: ಮೊಯ್ಲಿ
ಬೆಂಗಳೂರು, ಮೇ 30: ಕನ್ನಡ ಭಾಷೆಯಲ್ಲಿಯೂ ಏಕೀಕೃತ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ನೀಟ್) ಬರೆಯುವ ಅವಕಾಶವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಾಹಿತಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ, ನೂತನ ಕಸಾಪ ಜಿಲ್ಲಾಧ್ಯಕ್ಷರುಗಳಿಗೆ ತರಬೇತಿ ಶಿಬಿರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೀಟ್ ಪರೀಕ್ಷೆಯನ್ನು ಇತರೆ ಭಾಷೆಗಳಲ್ಲೂ ಬರೆಯಲು ಅವಕಾಶ ನೀಡಬೇಕೆನ್ನುವ ಕೂಗು ಈಗಾಗಲೇ ಎಲ್ಲೆಡೆ ಎದ್ದಿದೆ. ಅಲ್ಲದೆ, ಕನ್ನಡ ಭಾಷೆಯಲ್ಲಿಯೂ ನೀಟ್ ಪರೀಕ್ಷೆ ಬರೆಯಲು ಅವಕಾಶವಿದೆ. ಆದರೆ, ಕನ್ನಡದಲ್ಲಿ ವಿಜ್ಞಾನ ಪರೀಕ್ಷೆ ಬರೆಯುವರ ಸಂಖ್ಯೆ ತೀರ ಕಡಿಮೆ. ಹೀಗಾಗಿ, ಮುನ್ನೋಟದ ದೃಷ್ಟಿಯಿಟ್ಟು ಕನ್ನಡದಲ್ಲಿಯೇ ವಿಜ್ಞಾನ ಪರೀಕ್ಷೆ ಬರೆಯುವರ ಸಂಖ್ಯೆ ಶೇ.5 ರಷ್ಟಾದರೂ ಏರಿಸಬೇಕೆಂದು ಅವರು ಹೇಳಿದರು.
ನೀಟ್ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ವಿಶ್ವದ ಭಾಷಾ ಸಂಪತ್ತು ಸಂಗ್ರಹಿಸುವ ನಿಂಘಟು ಕನ್ನಡಕ್ಕೆ ಬೇಕಾಗಿದ್ದು, ಇಂತಹ ನಿಘಂಟು ರಚಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಕಾವ್ಯ, ಕಾದಂಬರಿ ರಚನೆಗೆ ಸಂಶೋಧನೆ ಹೆಚ್ಚಾಗಿರಬೇಕು. ಅಲ್ಲದೆ, ಸಂಶೋಧನೆ ಕೇವಲ ವಿಶ್ವವಿದ್ಯಾಲಯಗಳಿಗೆ ಸೀಮಿತಗೊಳ್ಳಬಾರದು ಎಂದ ಅವರು, ಇದೀಗ ಕಂಪ್ಯೂಟರ್ ಸಹಾಯದಿಂದ ಕನ್ನಡ ಭಾಷೆಯ ವ್ಯಾಪ್ತಿಯನ್ನು ಹೆಚ್ಚಿಸಬಹುದು. ವಿವಿಧ ಇಲಾಖೆಗಳಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಹೊಸ ಕಾರ್ಯಕ್ರಮ ರೂಪಿಸಿ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಸಲಹೆ ಮಾಡಿದರು.
ನ್ಯಾಯಾಲಯಗಳಲ್ಲಿ ಆದೇಶ ಪ್ರತಿ ಸೇರಿ ಇನ್ನಿತರೆ ಕಡತಗಳು ಕನ್ನಡದಲ್ಲಿ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಒಗ್ಗೂಡಿ ವ್ಯವಸ್ಥೆಯ ರೀತಿಯಲ್ಲಿ ಎಲ್ಲವೂ ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ಯೋಜನೆ ರೂಪಿಸಬೇಕು. ಈ ಬಗ್ಗೆ ಎಲ್ಲರೊಂದಿಗೆ ಚರ್ಚೆಯಾಗಬೇಕೆಂದು ಮೊಯ್ಲಿ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸುದೀರ್ಘ ಇತಿಹಾಸ ಇರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ರಾಜ್ಯ ಸರಕಾರ ಪ್ರಸ್ತುತ 10 ಕೋಟಿ ರೂ. ಅನುದಾನ ನೀಡಿದ್ದು, ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಕನ್ನಡ ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪ ಬಾರದಂತೆ ಕನ್ನಡ ಸಾಹಿತ್ಯ ಪರಿಷತ್ ಕೆಲಸ ಮಾಡಬೇಕು. ಸದಸ್ಯರ ಶುಲ್ಕ, ದತ್ತಿ ಶುಲ್ಕ ಸೇರಿ ಇನ್ನಿತರೆ ಆದಾಯಗಳಿಗೆ ಕ್ರಮ ಬದ್ಧ ಲೆಕ್ಕಪತ್ರವಿರಬೇಕು. ತಾಲೂಕು ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಮತ್ತು ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್, ಗೌರವ ಕಾರ್ಯದರ್ಶಿಗಳಾದ ಡಾ.ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ, ಪಿ.ಮಲ್ಲಿಕಾರ್ಜುನಪ್ಪ ಸೇರಿ ಪ್ರಮುಖರು ಹಾಜರಿದ್ದರು.