ಗಿನ್ನೆಸ್‌ಗೆ ಸೇರ್ಪಡೆಗೊಂಡ ಮಂಗಳೂರಿನ ಅರ್ಮಾನ್ ಸಾಧನೆ

ಉಡುಪಿ, ಮೇ 30: ಅತ್ಯಂತ ಉದ್ದದ ಮೊಬೈಲ್ ಫೋನ್ ಸೆಲ್ಫಿ ಸ್ಟಿಕ್ ತಯಾರಿಸಿರುವ ಮಣಿಪಾಲ ಎಂಐಟಿಯ ಎಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮೂರನೆ ವರ್ಷದ ಆರನೆ ಸೆಮಿಸ್ಟರ್‌ನ ವಿದ್ಯಾರ್ಥಿ ಮಂಗಳೂರು ಹಂಪನಕಟ್ಟೆಯ ಅರ್ಮಾನ್(20) ಸಾಧನೆ ಇದೀಗ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದೆ.
ಅರ್ಮಾನ್ 10.39ಮೀಟರ್ ಉದ್ದ ಸೆಲ್ಫಿ ಸ್ಟಿಕ್ ತಯಾರಿಸುವ ಮೂಲಕ ಅಮೆರಿಕಾದ ಹಾಲಿವುಡ್ ನಟ ಬೆನ್ ಸ್ಟಿಲ್ಲರ್(8.56 ಮೀಟರ್ ಉದ್ದದ ಸೆಲ್ಫಿಸ್ಟಿಕ್) ಹೆಸರಿನಲ್ಲಿದ್ದ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಎ.11 ರಂದು ಮಣಿಪಾಲ ಎಂಐಟಿಯ 10ನೆ ಬ್ಲಾಕ್‌ನಲ್ಲಿರುವ ಮೈದಾನದಲ್ಲಿ ಗಿನ್ನೆಸ್ ದಾಖಲೆಯ ಪ್ರಯತ್ನವನ್ನು ನಡೆಸಿದ ಅರ್ಮಾನ್ 10.39 ಮೀಟರ್ ಉದ್ದದ ಸೆಲ್ಫಿ ಸ್ಟಿಕ್‌ನ್ನು ಗಣ್ಯರ ಸಮ್ಮುಖದಲ್ಲಿ ಪ್ರದರ್ಶಿಸಿದ್ದರು. ಇದನ್ನು ಸಂಪೂರ್ಣ ಚಿತ್ರೀಕರಣ ಮಾಡಿ, ಅದರ ಛಾಯಾಚಿತ್ರ ಹಾಗೂ ವಿಡಿಯೋ ರೆಕಾರ್ಡ್‌ನ್ನು ಗಿನ್ನೆಸ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು.
ಇವರ ಈ ಸಾಧನೆಯನ್ನು ಪರಿಗಣಿಸಿರುವ ಗಿನ್ನೆಸ್ ಸಂಸ್ಥೆಯು ಹೊಸ ದಾಖಲೆ ಪುಟಕ್ಕೆ ಸೇರಿಸಿದೆ. ಇದರ ಪ್ರಮಾಣಪತ್ರವನ್ನು ಸಂಸ್ಥೆ ಇಂದು ಅರ್ಮಾನ್ ಅವರಿಗೆ ಕಳುಹಿಸಿಕೊಟ್ಟಿದೆ.
ಅರ್ಮಾನ್ ಮಂಗಳೂರಿನ ಮುಹಮ್ಮದ್ ಸೂರಿಂಜೆ ಹಾಗೂ ರೆಹನಾ ದಂಪತಿಯ ಪುತ್ರ.







