ತಂದೆಯ ಮನೆಗೆ ಬೆಂಕಿಯಿಟ್ಟು ನಗ, ನಗದು ದೋಚಿದ ಮಗ
.jpg)
ಹಾಸನ, ಮೇ 30: ವ್ಯಕ್ತಿಯೋರ್ವರ ಮೊದಲನೆ ಹೆಂಡತಿಯ ಮಗನೊಬ್ಬ ಮನೆಗೆ ಬೆಂಕಿ ಹಾಕಿ, ಮನೆಯಲ್ಲಿದ್ದ ಹಣ, ಒಡವೆಯನ್ನು ದೋಚಿ ಪರಾರಿಯಾಗಿದ್ದು, ಬೆಂಕಿಯ ಶಾಖ ತಡೆಯಲಾಗದೆ ಮನೆ ಒಳಗಿದ್ದ ಕರು ಹಾಗೂ ಕುರಿ ಸಾವನಪ್ಪಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ತಾಲೂಕಿನ ತಟ್ಟೆಕೆರೆ ಗ್ರಾಮದ ಕೃಷ್ಣೇಗೌಡ ಎಂಬವರ ಮನೆ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದ್ದು, ಕೃಷ್ಣೇಗೌಡರ ಮೆದಲನೆ ಹೆಂಡತಿಯ ಮಗ ದೀಪು ಅಲಿಯಾಸ್ ದೇವರಾಜ್ ಕೃತ್ಯ ಎಸಗಿದ ಭೂಪ.
ದೀಪು ಆಗಾಗ್ಗೆ ಮದ್ಯ ಸೇವನೆ ಮಾಡಿ ಕೃಷ್ಣೇಗೌಡರ ಎರಡನೆ ಹೆಂಡತಿ ಶೋಭಾರ ಮನೆಗೆ ಬಂದು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ. ರವಿವಾರ ರಾತ್ರಿ ಕುಡಿದ ಅಮಲಿನಲ್ಲಿ ಬಂದು ಗಲಾಟೆ ಮಾಡಿದ್ದಾನೆ. ಹೆದರಿದ ಮನೆಯವರು ಮನೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಯಲ್ಲಿ ಮಲಗಿದ್ದಾರೆ. ರಾತ್ರಿ 1 ಗಂಟೆಯ ಸಮಯದಲ್ಲಿ ದೀಪು ಮನೆಯ ಹತ್ತಿರ ಬಂದಾಗ ಬೀಗ ಹಾಕಿದ್ದನ್ನು ಗಮನಿಸಿ, ಬೀಗ ಒಡೆದು ಒಳ ಪ್ರವೇಶ ಮಾಡಿ, ಮನೆ ಒಳಗಿದ್ದ ಬೀರುವಿನ ಬೀಗ ಒಡೆದು 90 ಸಾವಿರ ರೂ. ನಗದು, 80 ಗ್ರಾಂ ಚಿನ್ನಾರಣ ಹಾಗೂ ಬೆಳ್ಳಿ ವಸ್ತುವನ್ನು ದೋಚಿದ ಬಳಿಕ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಾಕಿದ್ದಾನೆ ಎಂದು ದೂರಲಾಗಿದೆ.
ನಾಲ್ಕು ಗಂಟೆಯ ವೇಳೆ ಬೆಂಕಿ ಹತ್ತಿ ಉರಿಯುತ್ತಿರುವುದು ಕಂಡು ಬಂದು ನಂತರ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ಅಪಾಯವನ್ನು ತಪ್ಪಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.







