ಮೂಡುಬಿದಿರೆಯ ಬಾಹುಬಲಿ ಪ್ರಸಾದ್‌ಗೆ ಭಾರತ ಜ್ಯೋತಿ ಪ್ರಶಸ್ತಿ
.jpg)
ಮೂಡುಬಿದಿರೆ, ಮೇ 30: ಇಂಡಿಯಾ ಇಂಟರ್‌ನ್ಯಾಷನಲ್ ಫ್ರೆಂಡ್‌ಶಿಪ್ ಸೊಸೈಟಿ ವತಿಯಿಂದ ದೇಶದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಭಾರತ ಜ್ಯೋತಿ ಪ್ರಶಸ್ತಿಗೆ ಮೂಡುಬಿದಿರೆಯ ನ್ಯಾಯವಾದಿ, ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 9ರಂದು ದೆಹಲಿಯಲ್ಲಿ ನಡೆಯಲಿದೆ. ಬಾಹುಬಲಿ ಪ್ರಸಾದ್ ಅವರ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಈ ಪ್ರತಿಷ್ಠಿತ ಪ್ರಶಸ್ತಿಗೆ ದೇಶದ ನಾನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ 35 ಸಾಧಕರನ್ನು ಬೇರೆ ಬೇರೆ ರಾಜ್ಯಗಳಿಂದ ಗುರುತಿಸಲಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ವ್ಯಕ್ತಿ ಎಂ. ಬಾಹುಬಲಿ ಪ್ರಸಾದ್.
ದೆಹಲಿಯಲ್ಲಿ ಜೂನ್ 9ರಂದು ಎಕನಾಮಿಕ್ ಗ್ರೋಥ್ ಆ್ಯಂಡ್ ನ್ಯಾಷನಲ್ ಇಂಟರಗೇಷನ್ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡುವ ಜೊತೆಗೆ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ ಪ್ರಮಾಣ ಪತ್ರವನ್ನೂ ಪ್ರದಾನ ಮಾಡಲಾಗುತ್ತದೆ.
ಬಿ.ಡಿ.ಜತ್ತಿ, ಕರ್ನಾಟಕ ರಾಜ್ಯಪಾಲ ವಜೂಭಾಯಿ ವಾಲಾ, ಕೇಸರಿನಾಥ್ ತ್ರಿಪಾಠಿ, ಇಕ್ಬಾಲ್ ಸಿಂಗ್, ಶೇಖರ್ ದತ್ತ್, ಡಾ.ಡಿ.ವೈ. ಪಾಟೀಲ್, ಜೆ.ಜೆ. ಸಿಂಗ್, ಎಂ.ಎಂ. ಲಖೇರಾ, ಫಾತಿಮಾ ಬೀವಿ, ಜಿ.ವಿ. ಕೃಷ್ಣರಾವ್, ಅಜಯ್ ಸಿಂಗ್, ಡಾ. ಡಿಶಮ್ ನರೈನ್ ಸಿಂಗ್, ಆಚಾರ್ಯ ದೇವ್ರಾತ್, ಎನ್.ಸಿ. ಸೂರಿ, ಪಿ.ಎನ್. ಭಗವತಿ, ಆರ್ಯಾಸ್ ಸರ್ಕಾರಿಯಾ, ಎಚ್.ಆರ್. ಖನ್ನಾ, ಜಿ.ವಿ.ಜಿ. ಕೃಷ್ಣಮೂರ್ತಿ, ಪ್ರೇಮ್ ಕುಮಾರ್ ದುಮಾಲ್, ಮುಝಪ್ಪರ್ ಹುಸೈನ್, ಬಿ.ಕೆ. ಗೋಯಲ್, ನಾಸಿರ್ ಶ್ರಾಫ್, ಉಸ್ತಾದ್ ಅಂಝದ್ ಅಲಿ ಖಾನ್, ಸುನಿಲ್ ಗವಾಸ್ಕರ್, ಸಯ್ಯದ್ ಕಿರ್ಮಾನಿ, ಅಭಿನವ್ ಬಿಂದ್ರಾ, ಧನರಾಜ್ ಪಿಳ್ಳೆ ಮುಂತಾದ ಖ್ಯಾತನಾಮರು ಈ ಪ್ರಶಸ್ತಿಯನ್ನು ಈ ಹಿಂದೆ ಪಡೆದಿದ್ದರು.
ಬಾಹುಬಲಿ ಪ್ರಸಾದ್ ಅವರು ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ವಕೀಲ ವೃತ್ತಿ ನಿರ್ವಹಿಸಿಕೊಂಡು ಬರುತ್ತಿದ್ದು, ಮೂಡುಬಿದಿರೆ ಪುರಸಭಾ ಸದಸ್ಯರಾಗಿ, ಮೂಡುಬಿದಿರೆ ಬಾರ್ ಕೌನ್ಸಿಲ್‌ನ ಪ್ರಥಮ ಅಧ್ಯಕ್ಷರಾಗಿ, ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.







