ಪಡಿತರ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯ: ಇಂದು ಕೊನೆ ದಿನ
ಮಡಿಕೇರಿ, ಮೇ 30: ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದ ಪಡಿತರದಾರರರಿಗೆ ದಿನಸಿ ಪದಾರ್ಥಗಳ ವಿತರಣೆಯನ್ನು ತಡೆ ಹಿಡಿಯಲಾಗುವುದು ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.
ಮೇ 15 ಕೊನೆಯ ದಿನವಾಗಿತ್ತಾದರೂ ಜನರು ಆಧಾರ್ ಸಂಖ್ಯೆಯನ್ನು ನೀಡದೆ ನಿರ್ಲಕ್ಷವಹಿಸಿದ್ದ ಕಾರಣ ಸರಕಾರ ಮೇ 31 ಕೊನೆ ದಿನವೆಂದು ನಿಗದಿಪಡಿಸಿದೆ. ಆದ್ದರಿಂದ ಜಿಲ್ಲೆಯ ಈವರೆಗೆ ಆಧಾರ್ ಸಂಖ್ಯೆ ನೀಡದೆ ಇರುವ ಎಲ್ಲ ಪಡಿತರ ಚೀಟಿದಾರರು ಅಂದರೆ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರು ಸಂಬಂಧಪಟ್ಟ ಗ್ರಾಮ ಪಂಚಾಯತ್‌ನಲ್ಲಿ ಹಾಗೂ ಪಟ್ಟಣ, ನಗರ ಪ್ರದೇಶದ ಪಡಿತರ ಚೀಟಿದಾರರು ಸಂಬಂಧಪಟ್ಟ ಫೋಟೊ ಬಯೋ ಸೆಂಟರ್‌ಗಳಲ್ಲಿ ತಮ್ಮ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಹೊಂದಾಣಿಕೆ ಮಾಡಿಸಿ ತಾಲೂಕು ಕಚೇರಿಯಲ್ಲಿ ನಮೂದು ಮಾಡಿಸಬೇಕು. ಈ ಬಗ್ಗೆ ಕಾರ್ಡುದಾರರು ಮತ್ತೆ ನಿರ್ಲಕ್ಷವಹಿಸಿದಲ್ಲಿ ಅಂತಹವರ ಪಡಿತರ ಚೀಟಿಗಳಿಗೆ ಆಹಾರ ಪದಾರ್ಥಗಳ ವಿತರಣೆಯನ್ನು ತಡೆ ಹಿಡಿದು, ಪಡಿತರ ಚೀಟಿಗಳನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ಚಂದ್ರಕಾಂತ್ ನಾಯಕ್ ತಿಳಿಸಿದ್ದಾರೆ.





