ರಾಜಕೀಯ ಪಕ್ಷಗಳಿಂದ ಸಂಬಂಧ ವಿರಳ: ಡಾ.ಎಂ.ಕೆ.ಭಟ್

ಸೊರಬ, ಮೇ 30: ರಾಜಕೀಯ ಪಕ್ಷಗಳು ಸಂಬಂಧಗಳನ್ನು ದೂರ ಮಾಡುತ್ತವೆ. ಆದರೆ, ಸಂಘ ಸಂಸ್ಥೆಗಳು ಸಂಬಂಧಗಳನ್ನು ಪರಸ್ಪರ ಬೆಸೆಯುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಡಾ.ಎಂ.ಕೆ.ಭಟ್ ನುಡಿದರು.
ಪಟ್ಟಣದ ಗುರುಭವನದಲ್ಲಿ ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಟ್ರಸ್ಟ್‌ನ ಉದ್ಘಾಟನೆ ಹಾಗೂ ಕಾಗೋಡು ಚಳವಳಿ ರೂವಾರಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಜಾತ್ಯತೀತ ವ್ಯವಸ್ಥೆಯ ಅಗತ್ಯವಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ರಾಜಕಾರಣದಿಂದ ತಾಲೂಕು ಪ್ರಗತಿಯತ್ತ ಸಾಗುತ್ತಿದ್ದರೂ ಸಹ, ಸಂಘ ಸಂಸ್ಥೆಗಳ ಮೂಲಕ ಸಾಗಿದಾಗ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು. ಶಿಕ್ಷಕ ಚಂದ್ರಪ್ಪ ಮಾತನಾಡಿ, ಆಧುನಿಕ ಯುಗದಲ್ಲೂ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರಗಳಂತ ಅಮಾನವೀಯ ಘಟನೆಗಳು ಮನುಕುಲದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಮೌಢ್ಯ ತುಂಬಿರುವ ಸಮಾಜದಲ್ಲಿ ಸುಶಿಕ್ಷಿತರು ಇಂತಹ ಅನಿಷ್ಟವನ್ನು ಹೋಗಲಾಡಿಸಲು ಮುಂದಾಗಬೇಕು. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪರಿಪಾಲಿಸಬೇಕಾಗಿದ್ದು, ಸಮಾಜ ಸುಧಾರಕರ ಕೊಡುಗೆ ಭಾರತ ದೇಶದಲ್ಲಿ ಅಪಾರವಾಗಿದ್ದು, ಅವರ ಮಾರ್ಗದಲ್ಲಿ ಸಾಗಲು ಎಲ್ಲರೂ ಪಣತೊಡಬೇಕೆಂದರು. ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರು ಹಾಗೂ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ತಾಪಂ ಮಾಜಿ ಅಧ್ಯಕ್ಷ ಜೆ. ಶಿವಾನಂದಪ್ಪ ವಹಿಸಿದ್ದರು. ನಾಗರಾಜ ಗೌಡ, ಸಿ.ಆರ್. ನಾಯಕ್, ಎಂ.ಡಿ. ಶೇಖರ್, ಕೆ.ಎಚ್.ಬಸಪ್ಪ, ಬಂಗಾರಪ್ಪ, ಪಾರ್ವತಮ್ಮ, ಈಡೂರು ಪರಶುರಾಮಪ್ಪ ಎಂ.ಡಿ. ಹೊಳೆ ಲಿಂಗಪ್ಪ, ರಂಗಪ್ಪ ಹಳೇ ಸೊರಬ, ಕೆ.ಸಿ. ಶಿವಕುಮಾರ್, ಪ್ರಕಾಶ ಮಡ್ಲೂರ್, ನಾಗಪ್ಪ ಮಾಸ್ತರ್, ರಾಜಪ್ಪ ಮಾಸ್ತರ್ ಮತ್ತಿತರರು ಉಪಸ್ಥಿತರಿದ್ದರು.





