ಸಾಗರ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
.jpg)
ಸಾಗರ, ಮೇ 30: ರಾಜ್ಯ ಸರಕಾರ ಪಶು ಸಂಗೋಪನಾ ಇಲಾಖೆಗೆ ಪ್ರತಿ ವರ್ಷ ಕೋಟ್ಯಂತರ ರೂ. ಬಜೆಟ್‌ನಲ್ಲಿ ಮೀಸಲಿಟ್ಟು ಈ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಕಾಳಜಿ ವಹಿಸುತ್ತಿದೆ. ಆದರೆ ಈ ಸಾಲಿನಲ್ಲಿ ಯಂತ್ರೋಪಕರಣ ಖರೀದಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಿರುವ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಇಲ್ಲಿನ ಪಶು ವೈದ್ಯಕೀಯ ಇಲಾಖೆಯಲ್ಲಿ ಸೋಮವಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಅಭಿವೃದ್ಧಿ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಹುಲ್ಲು ಕೊಚ್ಚುವ ಯಂತ್ರವನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ರೈತ ಸಮೂಹ ಸಂಕಷ್ಟದಲ್ಲಿದೆ. ಕೃಷಿಯೊಂದಿಗೆ ಉಪ ಕಸುಬು ನಡೆಸುತ್ತಿರುವ ರೈತ ಸಮೂಹಕ್ಕೆ ರಾಜ್ಯ ಸರಕಾರ ಯಂತ್ರೋ ಪಕರಣಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಿರುವ ಕ್ರಮದ ಬಗ್ಗೆ ತಾಪಂನಲ್ಲಿ ನಿರ್ಣಯ ಕೈಗೊಂಡು ಜಿಪಂ ಮೂಲಕ ಸರಕಾರಕ್ಕೆ ಕಳುಹಿಸಲಾಗುತ್ತದೆ ಎಂದರು. ಕೃಷಿ ವಿಕಾಸ ಯೋಜನೆಯಡಿ ತೀವ್ರ ಮೇವು ಅಭಿವೃದ್ಧ್ದಿ ಕಾರ್ಯಕ್ರಮದಡಿ 19 ಫಲಾನುಭವಿಗಳಿಗೆ ಶೇ. 50 ರಿಯಾಯಿತಿ ದರದಲ್ಲಿ ಹುಲ್ಲು ಕೊಚ್ಚುವ ಯಂತ್ರವನ್ನು ವಿತರಣೆ ಮಾಡಲಾಗಿದೆ. ಇದರ ಜೊತೆಗೆ ಪಶುಭಾಗ್ಯ ಯೋಜನೆಯಡಿ 15 ಫಲಾನುಭವಿಗಳು, ಕುರಿಮೇಕೆ ಸಾಕಣೆ ಯೋಜನೆಯಡಿ 23 ಫಲಾನುಭವಿಗಳನ್ನು ಹಾಗೂ ಅಮೃತ ಯೋಜನೆಯಡಿ ವಿಧವೆಯರಿಗೆ ಹಸು ಸಾಕಣೆಗೆ 10 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ತಾಪಂ ಉಪಾಧ್ಯಕ್ಷ ಪರಶುರಾಮ್ ಮಾತನಾಡಿ, ರೈತರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ರೈತರು ಕೃಷಿಯಲ್ಲಿ ಆರ್ಥಿಕ ಚೈತನ್ಯ ಕಂಡುಕೊಳ್ಳಲು ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಲ್ಲು ಕೊಯ್ಯುವ ಯಂತ್ರವನ್ನು ಪಶು ಸಂಗೋಪನೆಗಾಗಿ ನೀಡುತ್ತಿರುವುದು ಗಮನಾರ್ಹವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಹೇಮಾ ರಾಜಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಸವಿತಾ ನಟರಾಜ್, ಕಲಸೆ ಚಂದ್ರಪ್ಪ, ಮಾಜಿ ಅಧ್ಯಕ್ಷ ಕೆ.ಹೊಳೆಯಪ್ಪ ಉಪಸ್ಥಿತರಿದ್ದರು.





