ಜಿಪಂ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಆಗ್ರಹಿಸಿ ಸಿಇಒಗೆ ಮನವಿ
ಶಿವಮೊಗ್ಗ, ಮೇ 30: ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳ ಅಧ್ಯಕ್ಷ - ಸದಸ್ಯರ ಆಯ್ಕೆಗೆ ಇತ್ತೀಚೆಗೆ ನಡೆದ ಸಾಮಾನ್ಯ ಸಭೆೆಯಲ್ಲಿ ಕಾಯ್ದೆಯನುಸಾರ ಚುನಾವಣೆ ನಡೆಸಲು ಸಾಧ್ಯವಾಗದೆ ಇರುವುದರಿಂದ ಮತ್ತೊಮ್ಮೆ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿ, ಬಿಜೆಪಿ ಪಕ್ಷದ ಸದಸ್ಯರು ಸೋಮವಾರ ಜಿಪಂ ಕಚೇರಿಯಲ್ಲಿ ಸಿಇಒ ಕೆ.ರಾಕೇಶ್‌ಕುಮಾರ್‌ರವರಿಗೆ ಮನವಿ ಪತ್ರ ಸಲ್ಲಿಸಿದರು. ಮೇ 24ರಂದು ನಡೆದ ಸಭೆಯಲ್ಲಿ ಚುನಾವಣಾಧಿಕಾರಿಗಳು ಕಾಯ್ದೆಯನುಸಾರ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ರ ಪ್ರಕರಣ 186ರ ಅಡಿ ಸ್ಥಾಯಿ ಸಮಿತಿಗಳ ರಚನೆಗೆ ತುರ್ತಾಗಿ ಜಿಪಂ ವಿಶೇಷ ಸಭೆೆ ಕರೆಯಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಆನವೇರಿ ಸದಸ್ಯ ವೀರಭದ್ರಪ್ಪ ಪೂಜಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅತ್ಯಧಿಕ 15 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಪಕ್ಷದ ಪರ ಜನಾಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಪಂ ಸ್ಥಾಯಿ ಸಮಿತಿಗಳ ರಚನೆಯ ವೇಳೆ ಬಿಜೆಪಿ ಪಕ್ಷಕ್ಕೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಚುನಾವಣೆಯ ಮೂಲಕ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಮೇ 24 ರಂದು ನಡೆದ ಸಭೆಯಲ್ಲಿ ಪಕ್ಷದ ಸದಸ್ಯರು ಒತ್ತಾಯಿಸಿದ್ದರು. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಕೆಲ ನಿಮಿಷಗಳ ಕಾಲ ಸಭೆೆ ಮುಂದೂಡಲಾಗಿತ್ತು. ರಾಜೀ ಸಂಧಾನ ಮಾತುಕತೆ ನಡೆಯಿತು. ಆದರೆ ತದನಂತರ ಏಕಾಏಕಿ ಸಭೆೆ ನಡೆಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ನಿರ್ಣಯವನ್ನು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಪಕ್ಷವು ಕೈಗೊಂಡಿತ್ತು. ನಿರ್ಣಯ ಕೈಗೊಂಡ ವೇಳೆ ಬಿಜೆಪಿಯ ಓರ್ವ ಸದಸ್ಯರೂ ಸಭೆೆಯಲ್ಲಿರಲಿಲ್ಲ ಎಂದು ವೀರಭದ್ರಪ್ಪ ಪೂಜಾರ್ ತಿಳಿಸಿದ್ದಾರೆ. ಬಿಜೆಪಿ ಸದಸ್ಯರ ಗೈರು ಹಾಜರಿಯಲ್ಲಿ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಕಾನೂನುಬಾಹಿರವಾಗಿ ನಿರ್ಣಯ ಅಂಗೀಕರಿಸಿರುವುದನ್ನು ರದ್ದುಪಡಿಸಬೇಕು. ಹೊಸದಾಗಿ ಚುನಾವಣೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ಸಿಇಒರವರು ತಕ್ಷಣವೇ ಹೊಸದಾಗಿ ವಿಶೇಷ ತುರ್ತು ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ವೇಳೆ ನಗರ ಕ್ಷೇತ್ರದ ಸದಸ್ಯ ಸುರೇಶ್ ಸ್ವಾಮಿರಾವ್, ರಾಜಶೇಖರ್ ಗಾಳೀಪುರ, ಕೆ.ಬಿ.ಶ್ರೀನಿವಾಸ್, ಹೇಮಾವತಿ, ಅರುಂಧತಿ, ಮಮತಾ ಸಾಲಿ, ಸೌಮ್ಯಾ ಬಿ.ನಾಯ್ಕಾ, ಆರ್.ಸಿ.ಮಂಜುನಾಥ್, ಸತೀಶ್, ಅಕ್ಷತಾ, ರೇಣುಕಮ್ಮ ಮೊದಲಾದವರಿದ್ದರು.





