ಕಾಡಾನೆ ಹಾವಳಿ ನಿಯಂತ್ರಣಕೆ ಅಧಿಕಾರಿಗಳ ಸಭೆ: ರಾಜ್‌ಕುಮಾರ್ ಖತ್ರಿ ಭರವಸೆ
ಮಡಿಕೇರಿ: ಜನ ಸಂಪರ್ಕ ಸಭೆ

ಮಡಿಕೇರಿ, ಮೇ 30: ಜಿಲ್ಲೆಯ ತಿತಿಮತಿ ವ್ಯಾಪ್ತಿ ಸೇರಿದಂತೆ ಇತರ ಭಾಗಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣ ಹಾಗೂ ಹಾಡಿಯ ಗಿರಿಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಬಂಧ ಜೂನ್ ತಿಂಗಳಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ತಿತಿಮತಿ ಗ್ರಾಮ ಪಂಚಾಯತ್‌ನ ಸಮುದಾಯ ಭವನದಲ್ಲಿ ಸೋಮವಾರ ನಡೆದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಮೂಲ ನಿವಾಸಿ ಗಿರಿಜನರಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲವಾಗಿದ್ದು, ಅದನ್ನು ಕಲ್ಪಿಸಬೇಕಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಳಿದರು. ಜಿಲ್ಲೆಯ ಹಾಡಿ ಜನರ ಬದುಕು, ಬವಣೆಯನ್ನು ಖುದ್ದು ಅವಲೋಕನ ಮಾಡಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆತರಲು ಪ್ರಯತ್ನಿಸಲಾಗುವುದು. ಹಾಡಿ ಜನರ ಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮನವರಿಕೆ ಮಾಡಲಾಗುವುದು ಎಂದರು.
ತಿತಿಮತಿ ವ್ಯಾಪ್ತಿಯ ಹಲವು ಗಿರಿಜನ ಹಾಡಿಗಳಲ್ಲಿ ಕುಡಿಯಲು ನೀರಿಲ್ಲ. ಓಡಾಡಲು ರಸ್ತೆ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಓಡಾಡಲು ರಸ್ತೆ ನಿರ್ಮಾಣಕ್ಕಾದರೂ ಅವಕಾಶ ಮಾಡಬೇಕು ಎಂದು ರಾಜ್‌ಕುಮಾರ್ ಖತ್ರಿ ಸಲಹೆ ನೀಡಿದರು.
ತಿತಿಮತಿ ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಿನಿ ಬಸ್ ಸೌಲಭ್ಯ ಅಥವಾ ಸಾರಿಗೆ ವೆಚ್ಚ ಕಲ್ಪಿಸಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಈ ಸಂಬಂಧ ಸರ್ವ ಶಿಕ್ಷಣ ಅಭಿಯಾನದಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಿತಿಮತಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಪ್ರೌಢಶಾಲಾ ಶಿಕ್ಷಕರ ಹುದ್ದೆಯ ಭರ್ತಿಗೆ ಕ್ರಮ ವಹಿಸಲಾಗುವುದು. ಜನಸಂಪರ್ಕ ಸಭೆಗೆ ಹತ್ತು ಲಿಖಿತ ಅರ್ಜಿಗಳು ಸಲ್ಲಿಕೆಯಾಗಿವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲವು ಜಟಿಲ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ರಾಜ್ ಕುಮಾರ್ ಖತ್ರಿ ಹೇಳಿದರು.
ತೋಟಕ್ಕೆ ಹೊಂದಿಕೊಂಡಿರುವ ಕಾಡಾನೆಗಳು
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ಹಾವಳಿಯನ್ನು ಸಂಪೂರ್ಣವಾಗಿ ತಡೆ ಗಟ್ಟಲು ಅಸಾಧ್ಯ. ಆದರೂ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸಮಗ್ರ ಯೋಜನೆ ರೂಪಿಸಲು ಅಗತ್ಯ ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಕಾಫಿ ತೋಟಗಳಲ್ಲಿ ಸುಮಾರು 40 ರಿಂದ 50 ಕಾಡಾನೆಗಳು ವಾಸ ಮಾಡುತ್ತಿವೆ. ಇತ್ತೀಚೆಗೆ ಸುಂಟಿ ಕೊಪ್ಪ-ಚೆಟ್ಟಳ್ಳಿ ಮಾರ್ಗದಲ್ಲಿ ಎರಡು ಕಾಡಾನೆಗಳನ್ನು ಹಿಡಿಯಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಕುಡಿಯುವ ನೀರಿಗೆ ಅರಣ್ಯ ಇಲಾಖೆ ತಡೆ
ಈ ಸಂಬಂಧ ಮಾಹಿತಿ ನೀಡಿದ ಐಟಿಡಿಪಿ ಅಧಿಕಾರಿ ಸತೀಶ್ ಮಾತನಾಡಿ, ಗಿರಿಜನರಿಗೆ ಅರಣ್ಯ ಹಕ್ಕು ಪತ್ರ ನೀಡಿದ್ದರೂ ಆ ಪ್ರದೇಶಕ್ಕೆ ಕುಡಿಯುವ ನೀರು ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ಗಮನಕ್ಕೆ ತಂದರು. ಗಿರಿಜನರ ಅಭಿವೃದ್ಧಿಗೆ ಅರಣ್ಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಸತೀಶ್ ಅಸಹಾಯಕತೆ ವ್ಯಕ್ತ ಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿಯವರು, ಸಭೆಯಲ್ಲಿ ಒಪ್ಪಿಕೊಂಡು ಕಾಮಗಾರಿ ಕೈಗೊಳ್ಳುವ ಸಂದರ್ಭ ತಡೆ ಒಡ್ಡಿದರೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಲು ಗ್ರಾಮಸ್ಥರಿಗೆ ಸೂಚಿಸಿದರು.







