ಸರಕಾರಿ ಶಾಲೆ ದುರಸ್ತಿಗೆ 2.5 ಕೋಟಿ ರೂ. ಬಿಡುಗಡೆ: ಆರ್.ಪ್ರಸನ್ನಕುಮಾರ್
ಶಿವಮೊಗ್ಗ, ಮೇ 30: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳ ದುರಸ್ತಿ ಹಾಗೂ ನೂತನ ಶಾಲಾ ಕಟ್ಟಡಗಳ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 2.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದ ದುರ್ಗಿಗುಡಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರವರ ಪ್ರಯತ್ನದ ಫಲವಾಗಿ ಈ ಅನುದಾನ ಲಭ್ಯವಾಗಿದೆ. ರಾಜ್ಯದ ಯಾವ ವಿಧಾನಸಭಾ ಕ್ಷೇತ್ರಕ್ಕೂ ಇಷ್ಟೊಂದು ಬೃಹತ್ ಮೊತ್ತದ ಅನುದಾನ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಈ ಶಾಲೆಯಲ್ಲಿ ನೂರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಪೀಠೋಪಕರಣ ಸೇರಿದಂತೆ ಶಾಲೆಯ ಅಭಿವೃದ್ಧಿಗೆ ಅಗತ್ಯವಾದ ಅನುದಾನಗಳನ್ನು ತಮ್ಮ ನಿಧಿಯಿಂದ ಕಲ್ಪಿಸಲಾಗುವುದು. ಶಾಲೆಗೆ ಅಗತ್ಯವಾದ ಡಿ ಗ್ರೂಪ್ ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು. ಮೇಯರ್ ಎಸ್.ಕೆ. ಮರಿಯಪ್ಪಮಾತನಾಡಿ, ಶಾಲೆಗೆ ಶೌಚಾಲಯ ನಿರ್ಮಿಸಿಕೊಡಲು ಪಾಲಿಕೆ ವತಿಯಿಂದ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಸದ್ಯದಲ್ಲೇ ಇದರ ಕಾಮಗಾರಿ ಆರಂಭವಾಗಲಿದೆ. ಜೊತೆಗೆ ನೂತನ ಕಟ್ಟಡಕ್ಕೆ ಪೀಠೋಪಕರಣ ಮತ್ತು ಶಾಲೆಯ ಗೇಟನ್ನು ಹೊಸದಾಗಿ ನಿರ್ಮಿಸಿಕೊಡಲು ಪಾಲಿಕೆ ಆಡಳಿತ ಸಿದ್ಧವಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸೂಡಾ ಅಧ್ಕಕ್ಷ ಎನ್. ರಮೇಶ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮಹಾನಗರ ಪಾಲಿಕೆ ಸದಸ್ಯ ಐಡಿಯಲ್ ಗೋಪಿ, ಏಳುಮಲೈ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕೋ, ಶಿಕ್ಷಣ ಸಮನ್ವಯಾಧಿಕಾರಿ ಲೋಕೇಶಪ್ಪಹಾಗೂ ಮತ್ತಿತರರು ಉಪಸ್ಥಿತರಿದ್ದರು.





