ಸಮಾನ ವೇತನಕ್ಕೆ ಆಗ್ರಹಿಸಿ ಜೂ.2ರಂದು ನಡೆಯುವ ಮುಷ್ಕರಕ್ಕೆ ತಾಲೂಕು ಸಂಘ ಬೆಂಬಲ
ಪುತ್ತೂರು, ಮೇ 30: ಕೇಂದ್ರ ಸರಕಾರದ ನೌಕರರಿಗೆ ಸಮಾನವಾದ ವೇತನವನ್ನು ರಾಜ್ಯ ಸರಕಾರಿ ನೌಕರರಿಗೂ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರು ಜೂ.2ರಂದು ನಡೆಸುವ ಒಂದು ದಿನದ ಮುಷ್ಕರಕ್ಕೆ ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘ ಬೆಂಬಲ ನೀಡಲಿದೆ ಎಂದು ತಾಲೂಕು ಸಂಘದ ಅಧ್ಯಕ್ಷ ವೌರಿಸ್ ಮಸ್ಕರೇನಸ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1966ರಿಂದ 2011ರವರಗೆ 10 ವೇತನ ಆಯೋಗಗಳ ಮೂಲಕ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು. ಆದರೆ ರಾಜ್ಯ ಸರಕಾರ ಇದುವರೆಗೆ ಐದು ವೇತನ ಆಯೋಗ, 3 ಅಧಿಕಾರಿಗಳ ವೇತನ ಸಮಿತಿ ಹಾಗೂ ಒಂದು ಸಂಪುಟ ಉಪ ಸಮಿತಿ ರಚಿಸಿ ರಾಜ್ಯ ಸರಕಾರಿ ನೌಕರರ ವೇತನ ಮತ್ತು ಭತ್ತೆ ಪರಿಷ್ಕರಿಸಿದೆ. 2011ರಲ್ಲಿ ರಚಿತವಾದ ಅಧಿಕಾರಿಗಳ ಸಮಿತಿಯ ಶಿಫಾರಸನ್ನು 2012ರಲ್ಲಿ ಜಾರಿಗೊಳಿಸಿದ ನಂತರ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರ ವೇತನ ಭತ್ತೆಗಳಲ್ಲಿ ಕನಿಷ್ಠ ಶೇ. 20.51ರಿಂದ ಗರಿಷ್ಠ ಶೇ.87.78ರವರೆಗೆ ವ್ಯತ್ಯಾಸ ಉಂಟಾಗಿದೆ ಎಂದು ಹೇಳಿದರು.
ಒಂದೇ ಪ್ರದೇಶದಲ್ಲಿ, ಒಂದೇ ರೀತಿ ಕೆಲಸ ಮಾಡುವ ರಾಜ್ಯ ಮತ್ತು ಕೇಂದ್ರ ನೌಕರರ ನಡುವೆ ವೇತನ ಶ್ರೇಣಿಯಲ್ಲಿ ಅಪಾರ ವ್ಯತ್ಯಾಸ ಇದೆ. ದೇಶದ 24 ರಾಜ್ಯಗಳಲ್ಲಿ ಆಯಾ ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನ ಶ್ರೇಣಿ ಸಿಗುತ್ತಿದೆ. ಆದರೆ ಕರ್ನಾಟಕದಲ್ಲಿ ತಾರತಮ್ಯ ಧೋರಣೆ ಇದೆ. ಆದ್ದರಿಂದ ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನ ಶ್ರೇಣಿ ನೀಡುವಂತೆ ಒತ್ತಾಯಿಸಿ ಒಂದು ದಿನದ ಮುಷ್ಕರ ನಡೆಸಲಾಗುವುದು ಎಂದರು.
ಪುತ್ತೂರು ತಾಲೂಕಿನಲ್ಲಿ 1,809 ರಾಜ್ಯ ಸರಕಾರಿ ನೌಕರರು ಸಂಘದ ಸದಸ್ಯರಾಗಿದ್ದಾರೆ. ಆಸ್ಪತ್ರೆಯ ಹೆರಿಗೆ, ಅಪಘಾತದಂತಹ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಸರಕಾರಿ ನೌಕರರು ಕೆಲಸಕ್ಕೆ ಗೈರಾಗಲಿದ್ದಾರೆ. ಹೊರರೋಗಿ ವಿಭಾಗವೂ ಕೆಲಸ ಸ್ಥಗಿತಗೊಳಿಸಲಿದೆ. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಕೇಂದ್ರ ಸರಕಾದ ವ್ಯಾಪ್ತಿ ಇರುವುದರಿಂದ ರಾಜ್ಯ ಸರಕಾರಿ ನೌಕರರ ಮುಷ್ಕರದಲ್ಲಿ ಭಾಗಿಯಾಗುವುದಿಲ್ಲ. ಆದರೆ ಕಚೇರಿಯ ಇತರ ನೌಕರರು ಮುಷ್ಕರ ಹೂಡುವ ಕಾರಣದಿಂದ ಎಲ್ಲಾ ಸರಕಾರಿ ಕಚೇರಿಗಳು ಸ್ತಬ್ಧಗೊಳ್ಳಲಿದೆ. ಸರಕಾರಿ ನೌಕರರ ಎಲ್ಲಾ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದೆ ಎಂದರು.
ಪೊಲೀಸರ ಮುಷ್ಕರಕ್ಕೆ ಬೆಂಬಲ
ಜೂನ್ 4ರಂದು ಪೊಲೀಸರು ಕರೆ ಕೊಟ್ಟಿರುವ ಸಾಮೂಹಿಕ ಗೈರು ಹಾಜರಿ ಮುಷ್ಕರಕ್ಕೆ ರಾಜ್ಯ ಸರಕಾರಿ ನೌಕರರ ಸಂಘ ನೈತಿಕ ಬೆಂಬಲ ನೀಡಲಿದೆ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ಮುಷ್ಕರ ನಡೆಸುತ್ತಿದ್ದು, ಅವರ ಬೇಡಿಕೆಗೂ ಸರಕಾರ ಮನ್ನಣೆ ನೀಡುವ ಅಗತ್ಯವಿದೆ ಎಂದು ವೌರಿಸ್ ಮಸ್ಕರೇನಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ನಾಗೇಶ್ ಕೆ., ರಾಜ್ಯ ಪರಿಷತ್ ಸದಸ್ಯ ಕೆ.ಕೃಷ್ಣಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್ ಉಪಸ್ಥಿತರಿದ್ದರು.







