ವೇತನ ತಾರತಮ್ಯ: ಜೂ.2ರಂದು ರಾಜ್ಯ ಸರಕಾರಿ ನೌಕರರಿಂದ ಸಾಂಕೇತಿಕ ಮುಷ್ಕರ
ಉಡುಪಿ, ಮೇ 30: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರಕಾರಿ ನೌಕರರಿಗೂ ನೀಡುವಂತೆ ಆಗ್ರಹಿಸಿ ಜೂ.2ರಂದು ರಾಜ್ಯಾದ್ಯಂತ ಒಂದು ದಿನದ ಸಾಂಕೇತಿಕ ಮುಷ್ಕರವನ್ನು ನಡೆಸಲು ನಿರ್ದರಿಸಿದೆ.
ದೇಶದ ಸುಮಾರು 24 ರಾಜ್ಯಗಳು ತನ್ನ ನೌಕರರಿಗೆ ಕೇಂದ್ರ ಸರಕಾರದ ನೌಕರರಿಗೆ ಅನುಗುಣವಾಗಿ ವೇತನ ಹಾಗೂ ಭತ್ಯೆಗಳನ್ನು ಮಂಜೂರು ಮಾಡಿವೆ. ಪ್ರಸ್ತುತ ಕೇಂದ್ರ ಸರಕಾರದ 7ನೇ ವೇತನ ಆಯೋಗ ತನ್ನ ವರದಿ ಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಅದು 2016ರ ಜನವರಿಯಿಂದ ಅನ್ವಯ ಗೊಳ್ಳುವಂತೆ ಕೇಂದ್ರ ನೌಕರರಿಗೆ ಶೇ.23.55 ರಷ್ಟು ವೇತನ ಹಾಗೂ ಭತ್ಯೆಗಳಲ್ಲಿ ಹೆಚ್ಚಳ ಮಾಡಲು ಶಿಪಾರಸ್ಸು ಮಾಡಿದೆ.
ನಮ್ಮ ರಾಜ್ಯದಲ್ಲಿ 6ನೇ ವೇತನ ಆಯೋಗದ ಶಿಪಾರಸ್ಸುಗಳ ಅನುಷ್ಠಾನಕ್ಕೆ ರಚಿತವಾದ ಅಧಿಕಾರಿಗಳ ವೇತನ ಸಮಿತಿಯ ಶಿಪಾರಸ್ಸುಗಳು ಅವೈಜ್ಞಾನಿಕ ವಾಗಿದ್ದು, ರಾಜ್ಯ ಸರಕಾರಿ ನೌಕರರು ಇಂದಿಗೂ ಕನಿಷ್ಠ ಶೇ.20.51ರಿಂದ ಗರಿಷ್ಠ ಶೇ.86.39ರವರೆಗೆ ವೇತನ ಹಾಗೂ ಭತ್ಯೆಗಳಲ್ಲಿ ವ್ಯತ್ಯಾಸವನ್ನು ಹೊಂದಿದ್ದಾರೆ. ಪ್ರಸ್ತುತ ಕೇಂದ್ರ ಸರಕಾರ ತನ್ನ ನೌಕರರಿಗೆ 7ನೇ ವೇತನ ಆಯೋಗದ ಶಿಪಾರಸ್ಸು ಗಳನ್ನು ಅನುಷ್ಠಾನಗೊಳಿಸಿದಲ್ಲಿ ಈ ವ್ಯತ್ಯಾಸವು ಶೇ.44.06ರಿಂದ ಗರಿಷ್ಠ ಶೇ.109.94ರವರೆಗೆ ಏರಲಿದೆ.
ದೇಶದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರು ಅತ್ಯಂತ ಕಡಿಮೆ ವೇತನ ಹಾಗೂ ಭತ್ಯೆಗಳನ್ನು ಪಡೆಯುತ್ತಿದ್ದು, ಆದ್ದರಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಒಂದೇ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ, ಭತ್ಯೆಗಳಲ್ಲಿ ಸಮಾನತೆ ತರಲು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಒತ್ತಾಯಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಜೂ.2ರ ಗುರುವಾರ ಎಲ್ಲಾ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅಂದು ಬೆಳಗ್ಗೆ 10:00 ಗಂಟೆಗೆ ನೌಕರರ ಬಹಿರಂಗ ಸಭೆಯನ್ನು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಏರ್ಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಎಲ್ಲಾ ಸರಕಾರಿ ನೌಕರರು ಭಾಗಿಯಾಗಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜೂ.2ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಸಾಂಕೇತಿಕ ಮುಷ್ಕರ ನಡೆಯಲಿದೆ ಎಂದವರು ತಿಳಿಸಿದ್ದಾರೆ.







