ದೇವಸ್ಥಾನ ನಿರ್ಮಾಣ ವಿವಾದದಲ್ಲಿ ಘರ್ಷಣೆ: ಐವರ ಹತ್ಯೆ
ಅಲಹಾಬಾದ್,ಮೇ 30: ಇಲ್ಲಿಯ ಏಕಾವುನಿ ಗ್ರಾಮದಲ್ಲಿ ದೇವಸ್ಥಾನವೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ಘರ್ಷಣೆಯಲ್ಲಿ ಓರ್ವ ಪಿಎಸ್‌ಐ ಸೇರಿದಂತೆ ಐವರು ಕೊಲ್ಲಲ್ಪಟ್ಟಿದ್ದಾರೆ.
ಗ್ರಾಮದಲ್ಲಿ ಹಳೆಯ ದೇವಸ್ಥಾನವೊಂದಿದ್ದು ಅದರ ಉಸ್ತುವಾರಿಯನ್ನು ರಾಮ ಕೈಲಾಶ ಪಾಂಡೆ ಕುಟುಂಬವು ನೋಡಿಕೊಳ್ಳುತ್ತಿತ್ತು. ನೆರೆಕರೆಯ ಶಿವಸೇವಕ ಕುಟುಂಬವು ಇದರ ಪಕ್ಕದಲ್ಲಿಯೇ ಹೊಸ ದೇವಸ್ಥ್ಥಾನವನ್ನು ನಿರ್ಮಿಸುತ್ತಿತ್ತು. ಇದು ಅವೆರಡು ಕುಟುಂಬಗಳ ನಡುವೆ ದ್ವೇಷಕ್ಕೆ ಕಾರಣವಾಗಿತ್ತು.
ರವಿವಾರ ಕಾನಪುರದಲ್ಲಿ ಪಿಎಸ್‌ಐ ಆಗಿದ್ದ ಪಾಂಡೆಯ ಪುತ್ರ ಸುರೇಶ ಊರಿಗೆ ಬಂದಿದ್ದ. ಈ ವೇಳೆ ಎರಡೂ ಕುಟುಂಬಗಳ ನಡುವೆ ದೇವಸ್ಥಾನ ನಿರ್ಮಾಣ ಕುರಿತಂತೆ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಸುರೇಶ್ ರೈಫಲ್‌ನಿಂದ ಗುಂಡುಗಳನ್ನು ಹಾರಿಸಿದ್ದು ಶಿವಸೇವಕ, ಸೋದರ ಕೃಷ್ಣಸೇವಕ ಮತ್ತು ಆತನ ಪುತ್ರ ವಿಮಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಕಣ್ಣೆದುರೇ ನಡೆದ ತಮ್ಮವರ ಹತ್ಯೆಗಳಿಂದ ಆಕ್ರೋಶಿತ ಶಿವಸೇವಕ ಕುಟುಂಬದವರು ಗ್ರಾಮಸ್ಥರೊಂದಿಗೆ ಸೇರಿಕೊಂಡು ಪಾಂಡೆ ಮತ್ತು ಸುರೇಶರ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ ಎಂದು ಅಲಹಾಬಾದ್ ಐಜಿಪಿ ಆರ್.ಕೆ.ಚತುರ್ವೇದಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಏಳು ಜನರನ್ನು ಬಂಧಿಸಿದ್ದು ತನಿಖೆ ನಡೆಯುತ್ತಿದೆ.





