ತ್ಯಾಜ್ಯ ಸಂಸ್ಕರಣೆ ಪ್ರಮುಖ ಹಗರಣ ಕ್ಷೇತ್ರ: ಪಾರಿಕ್ಕರ್

ಪಣಜಿ,ಮೇ 30: ಕಸ ವಿಲೇವಾರಿ ಮತ್ತು ಒಳಚರಂಡಿ ತ್ಯಾಜ್ಯ ಸಂಸ್ಕರಣೆಯು ‘ಪ್ರಮುಖ ಹಗರಣ ’ಕ್ಷೇತ್ರವಾಗಿದೆ ಮತ್ತು ಕೇಂದ್ರ ಸರಕಾರದ ಯೋಜನೆಯಡಿ ನಿರ್ಮಾಣಗೊಂಡ ತ್ಯಾಜ್ಯ ಸಂಸ್ಕರಣಾ ಘಟಕಗಳ ಬಗ್ಗೆಯೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಸೋಮವಾರ ಹೇಳಿದರು.
ಸಾಲಿಗಾವ-ಕಲಂಗೂಟ್ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕವೊಂದನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕಸ ವಿಲೇವಾರಿ ಮತ್ತು ಒಳಚರಂಡಿ ತ್ಯಾಜ್ಯ ಸಂಸ್ಕರಣೆ ಹಗರಣಕ್ಕೆ ಅವಕಾಶವಿರುವ ಪ್ರಮುಖ ಕ್ಷೇತ್ರವಾಗಿದೆ. ಕೇಂದ್ರ ಸರಕಾರದ ಯೋಜನೆಗಳಡಿ ನಿರ್ಮಾಣಗೊಳ್ಳುವ ಶೇ.90ರಷ್ಟು ಶೌಚಾಲಯಗಳು 3-4 ವರ್ಷಗಳ ಬಳಿಕ ಬಳಕೆಯಾಗುವುದಿಲ್ಲ ಎಂದರು
ಕೆಲವರು ಈ ಶೌಚಾಲಯಗಳನ್ನು ಉರುವಲು ಕಟ್ಟಿಗೆಯನ್ನು ದಾಸ್ತಾನಿರಿಸಲು ಬಳಸುತ್ತಾರೆ. ಕೆಲವರು ಈ ಶೌಚಾಲಯಗಳನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆಯೋ ಆ ಉದ್ದೇಶಕ್ಕೆ ಬಳಸುವುದಿಲ್ಲ. ಆದರೆ ಈ ಬಗ್ಗೆ ತಪಾಸಣೆಯೇ ನಡೆಯುವುದಿಲ್ಲ. ಅದನ್ನು ಬಳಸದೆ ಅದು ಕೆಲಸ ಮಾಡುತ್ತದೆಯೇ ಇಲ್ಲವೇ ಎನ್ನುವುದನ್ನು ಪತ್ತೆ ಹಚ್ಚುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ತ್ಯಾಜ್ಯ ನಿರ್ವಹಣೆ ಇಂದು ದೇಶಾದ್ಯಂತ ದೊಡ್ಡ ದಂಧೆಯಾಗಿದೆ ಎಂದ ಅವರು, ಪಟ್ಟಭದ್ರ ಹಿತಾಸಕ್ತಿಗಳು ಈ ಕ್ಷೇತ್ರದಲ್ಲಿ ಬೇರು ಬಿಟ್ಟಿವೆ. ಸಿಎಜಿ ಪ್ರತಿಯೊಂದರ ಲೆಕ್ಕ ಪರಿಶೋಧನೆಯನ್ನು ನಡೆಸುತ್ತಾರೆ,ಆದರೆ ತ್ಯಾಜ್ಯ ನಿರ್ವಹಣೆಯ ಲೆಕ್ಕ ಪರಿಶೋಧನೆಯನ್ನು ನಡೆಸಿದ್ದನ್ನು ತಾನು ಕಂಡಿಲ್ಲ. ತ್ಯಾಜ್ಯ ರಾಶಿಯ ಬಳಿ ಹೋಗಲು ಧೈರ್ಯವಾದರೂ ಯಾರಿಗಿದೆ ಎಂದರು.





