ಎಫ್‌ಟಿಎ ಮಾತುಕತೆ ಪುನರಾರಂಭ

ಹೊಸದಿಲ್ಲಿ,ಮೇ 30: ಸುದೀರ್ಘ ಕಾಲದಿಂದ ಸ್ಥಗಿತಗೊಂಡಿರುವ ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ)ಕುರಿತ ಮಾತುಕತೆ ಪುನರಾರಂಭಗೊಳ್ಳುವ ಮುನ್ನ ಕೆಲವು ‘ತಪ್ಪು ಗ್ರಹಿಕೆಗಳು ’ನಿವಾರಣೆಯಾಗಬೇಕು ಎಂದು ಐರೋಪ್ಯ ಒಕ್ಕೂಟವು ಬಯಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ಮಾತುಕತೆಗಳ ಪುನರಾರಂಭಕ್ಕೆ ದಿನಾಂಕಗಳನ್ನು ಉಭಯ ಪಕ್ಷಗಳು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ ಎಂದೂ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಒಪ್ಪಂದದ ಕುರಿತು ಉಭಯ ಪಕ್ಷಗಳ ಮುಖ್ಯ ಸಂಧಾನಕಾರರ ನಡುವೆ ಮಾತುಕತೆಯನ್ನು ಕೋರಿ ತಾನು ಬರೆದಿದ್ದ ಪತ್ರಕ್ಕೆ ಉತ್ತರಿಸಿರುವ ಐರೋಪ್ಯ ಒಕ್ಕೂಟದ ವ್ಯಾಪಾರ ಆಯುಕ್ತೆ ಸಿಸಿಲಿಯಾ ಮಾಲ್ಮಸ್ಟ್ರಾಂ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಆದರೆ ಈ ‘ತಪ್ಪುಗ್ರಹಿಕೆಗಳು ’ಯಾವುದು ಎನ್ನುವುದನ್ನು ಅವರು ಹೇಳಲಿಲ್ಲ.
ವಿಶಾಲ ಬುನಾದಿಯ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಕ್ಕಾಗಿ ಮಾತುಕತೆಗಳು 2007ರಲ್ಲಿಯೇ ಆರಂಭಗೊಂಡಿದ್ದರೂ, ಬೌದ್ಧಿಕ ಆಸ್ತಿ ಹಕ್ಕು, ವಾಹನಗಳು ಮತ್ತು ಮದ್ಯಸಾರಗಳ ಮೇಲೆ ಸುಂಕ ಕಡಿತ ಮತ್ತು ಉದಾರ ವೀಸಾ ವ್ಯವಸ್ಥೆಯಂತಹ ಮುಖ್ಯ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿಂದಾಗಿ ಈ ಮಾತುಕತೆಗಳು ಹಲವು ತೊಡಕುಗಳಿಗೆ ಸಾಕ್ಷಿಯಾಗಿವೆ.
ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಿಕೊಳ್ಳಲು ಭಾರತ ಮತ್ತು ಐರೋಪ್ಯ ಒಕ್ಕೂಟಗಳ ಹಿರಿಯ ಅಧಿಕಾರಿಗಳು ಈ ವರ್ಷದಲ್ಲಿ ಎರಡು ಬಾರಿ ಪರಸ್ಪರ ಭೇಟಿಯಾಗಿದ್ದಾರೆ.





