ಪ್ರಜೆಗಳಿಗೆ ವೀಸಾರಹಿತ ಪ್ರಯಾಣ ನಿರಾಕರಿಸಿದರೆ ಒಪ್ಪಂದ ರದ್ದು
ಐರೋಪ್ಯ ಒಕ್ಕೂಟಕ್ಕೆ ಟರ್ಕಿ ಎಚ್ಚರಿಕೆ
ಅಂಟಾಲ್ಯ (ಟರ್ಕಿ), ಮೇ 30: ತನ್ನ ಪ್ರಜೆಗಳಿಗೆ ಐರೋಪ್ಯ ಒಕ್ಕೂಟದಲ್ಲಿ ವೀಸಾರಹಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡದಿದ್ದರೆ, ವಲಸಿಗರ ಹರಿವನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿ ಒಕ್ಕೂಟದೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ತಾನು ಹಿಂದೆ ಸರಿಯುವುದಾಗಿ ಟರ್ಕಿಯ ವಿದೇಶ ಸಚಿವರು ಎಚ್ಚರಿಸಿದ್ದಾರೆ.
ಶೆಂಝನ್ ವಲಯ (26 ಐರೋಪ್ಯ ದೇಶಗಳನ್ನು ಒಳಗೊಂಡ ಪ್ರದೇಶ. ಈ ಪ್ರದೇಶದಲ್ಲಿ ವಾಸಿಸುವವರು ಪರಸ್ಪರ ದೇಶಗಳಿಗೆ ಹೋಗಲು ಪಾಸ್‌ಪೋರ್ಟ್ ಹೊಂದಬೇಕಾಗಿಲ್ಲ ಹಾಗೂ ಗಡಿ ನಿಯಂತ್ರಣವೂ ಇಲ್ಲ)ಕ್ಕೆ ವೀಸಾರಹಿತ ಪ್ರಯಾಣಕ್ಕೆ ಅವಕಾಶ ನೀಡುವುದಕ್ಕೆ ಪ್ರತಿಯಾಗಿ ಟರ್ಕಿ ತನ್ನ ಭಯೋತ್ಪಾದನೆ ನಿಗ್ರಹ ಕಾನೂನುಗಳಲ್ಲಿ ಮಾರ್ಪಾಡು ಮಾಡಬೇಕೆಂಬುದಾಗಿ ಐರೋಪ್ಯ ಒಕ್ಕೂಟ ಆಗ್ರಹಿಸುತ್ತಿದೆ. ಆದರೆ, ಟರ್ಕಿಗೆ ತನ್ನ ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ಬದಲಾಯಿಸಲು ಸಾಧ್ಯವಾಗದು ಎಂದು ಆ ದೇಶದ ವಿದೇಶ ಸಚಿವ ಮೆವ್ಲಟ್ ಕವುಸೊಗ್ಲು ಹೇಳಿದರು. ‘‘ನಾವು ನಿಮಗೆ ಬೆದರಿಕೆ ಹಾಕುತ್ತಿಲ್ಲ, ಆದರೆ ವಾಸ್ತವ ಹಾಗಿದೆ ಎಂಬುದನ್ನು ನಾವು ಅವರಿಗೆ ಹೇಳಿದ್ದೇವೆ. ನಾವು ನಿಮ್ಮಿಂದಿಗೆ (ಐರೋಪ್ಯ ಒಕ್ಕೂಟ) ಎರಡು ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ ಹಾಗೂ ಆ ಒಪ್ಪಂದಗಳು ಪರಸ್ಪರ ಸಂಬಂಧ ಹೊಂದಿವೆ’’ ಎಂದು ಅಂಟಾಲ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕವುಸೊಗ್ಲು ಹೇಳಿದರು.
ಅಗತ್ಯ ಬಿದ್ದರೆ ಒಪ್ಪಂದವನ್ನು ತಡೆಹಿಡಿಯಲು ಟರ್ಕಿ ‘‘ಆಡಳಿತಾತ್ಮಕ’’ ಕ್ರಮಗಳನ್ನು ಬಳಸುವುದು ಎಂದರು.
ಅಮೆರಿಕ, ಟರ್ಕಿ ಕಾರ್ಯಾಚರಣೆಯಿಂದ ಐಸಿಸ್‌ಗೆ ಹೊಡೆತ
ಅಮೆರಿಕ ಮತ್ತು ಟರ್ಕಿಗಳ ಸೇನೆ ಜಂಟಿ ಕಾರ್ಯಾಚರಣೆ ನಡೆಸಿದರೆ ಐಸಿಸ್‌ನ್ನು ಸಿರಿಯದಿಂದ ಹೊಡೆದೋಡಿಸ ಬಹುದು ಎಂದು ಟರ್ಕಿ ವಿದೇಶ ಸಚಿವ ಮೆವ್ಲಟ್ ಕವುಸೊಗ್ಲು ಅಭಿಪ್ರಾಯಪಟ್ಟಿದ್ದಾರೆ.
ಸಿರಿಯದಲ್ಲಿ ಐಸಿಸ್‌ನ ಭದ್ರ ನೆಲೆಯಾಗಿರುವ ರಕ್ಕದವರೆಗೂ ಅಮೆರಿಕ-ಟರ್ಕಿ ಜಂಟಿ ಕಾರ್ಯಾಚರಣೆ ಮುಂದುವರಿಯಬಹುದಾಗಿದೆ ಎಂದು ಅವರು ಹೇಳಿದರು.
ರಕ್ಕದ ಮೇಲೆ ದಾಳಿ ನಡೆಸುವುದಕ್ಕೆ ಸಿದ್ಧತೆಯಾಗಿ ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆಗಳು ಮತ್ತು ಸಿರಿಯ ಡೆಮಾಕ್ರಟಿಕ್ ಪಡೆಗಳು ರಕ್ಕದ ಉತ್ತರ ಭಾಗದಲ್ಲಿರುವ ಪ್ರದೇಶಗಳನ್ನು ತೆರವುಗೊಳಿಸುತ್ತಿವೆ ಎಂದರು.







