ಕಡಬ ಕ್ನಾನಾಯ ಜ್ಯೋತಿ ಶಾಲಾ ಪ್ರಾರಂಭೋತ್ಸವ

ಕಡಬ, ಮೇ 30: ಇಲ್ಲಿನ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮೇ 30ರಂದು ನಡೆಯಿತು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ನೀಡಿ ಸಿಹಿ ಹಂಚಲಾಯಿತು. 2015-16ನೆ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಜೇಮ್ಸ್ ಕೋರ್‌ಮಡಂ, ಕಳೆದ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಂಸ್ಥೆಗೆ ಉತ್ತಮ ಫಲಿತಾಂಶ ಬಂದಿದ್ದು ಹೆಚ್ಚಿನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ. ಇಚ್ಚಾಶಕ್ತಿಯಿಂದ ಶಿಸ್ತುಬದ್ದವಾಗಿ ವಿದ್ಯೆ ಕಲಿತರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಈ ವರ್ಷದ ಪರೀಕ್ಷೆ ಫಲಿತಾಂಶ ಸಾಕ್ಷಿಯಾಗಿದೆ. ಉತ್ತಮ ಫಲಿತಾಂಶ ದಾಖಲಿಸಲು ಸಂಸ್ಥೆಯ ಸಂಚಾಲಕರ ನಿರಂತರ ಪರಿಶ್ರಮ, ಶಿಕ್ಷಕರ ಶಕ್ತಿ ಮೀರಿದ ದುಡಿಮೆಯೂ ಕಾರಣವಾಗಿದೆ ಎಂದು ಹೇಳಿ, ನೂತನ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಗುರು ರೆ.ಫಾ. ಸ್ಟಿಜೋ, ಇಲ್ಲಿನ ವಿದ್ಯಾಸಂಸ್ಥೆಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಇದಕ್ಕೆ ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಪೋಷಕರ ಪ್ರೋಕಾರಣವಾಗಿದೆ. ಶಿಸ್ತು ಬದ್ಧ ಶಿಕ್ಷಣಕ್ಕೆ ಕ್ನಾನಾಯ ಜ್ಯೋತಿ ಶಾಲೆ ಹೆಸರಾಗಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸುಸಂಸ್ಕೃತರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನ ಯಶಸ್ವಿಯಾಗಿ ಸಾಗಲಿ. ಪ್ರತಿವರ್ಷ ಉತ್ತಮ ಫಲಿತಾಂಶ ದಾಖಲಾಗಲು ಶಿಕ್ಷಕ ವೃಂದದ ಶ್ರಮ ಬಹಳಷ್ಟಿದೆ. ಅವರಿಗೂ ದೇವರು ಅನುಗ್ರಹಿಸಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಉಪಮುಖ್ಯ ಶಿಕ್ಷಕಿ ತೆರೆಸ್ಯಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನುಶ್ರೀ ಅನಿಸಿಕೆ ವ್ಯಕ್ತಪಡಿಸಿದರು.
ಸಹಶಿಕ್ಷಕ ಅಜೇಯ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಶೈಜು ನಾಕೂರು ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರರು, ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







