ಎರಡು ವರ್ಷದಲ್ಲಿ ‘ಅಚ್ಛೇದಿನ್’ ಯಾರಿಗೆ?
ಮಾನ್ಯರೆ,
‘ಅಚ್ಛೇದಿನ್’ ಹೆಸರಿನಲ್ಲಿ ಮತದಾರರ ಮುಂದೆ ನಿಂತು ಅವರಲ್ಲಿ ಕನಸುಗಳನ್ನು ಹುಟ್ಟುಹಾಕಿ ಮತಗಳನ್ನು ಪಡೆದ ಪ್ರಧಾನಿ ಮೋದಿಯವರ ಸರಕಾರದ ಎರಡು ವರ್ಷಗಳ ಕಾಲಾವಧಿ ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿದೆ.
ಹಿಂದಿನ ಯುಪಿಎ ಸರಕಾರದ ಹಲವಾರು ಯೋಜನೆಗಳನ್ನು ಮುಂದುವರಿಸುವುದನ್ನು ಬಿಟ್ಟರೆ ಪಕ್ಷದ ಸ್ವಂತ ಜನಪರ ಯೋಜನೆಗಳು ಯಾವುದೂ ಕಾಣುತ್ತಿಲ್ಲ. ಅಲ್ಲದೆ ಆಹಾರ ಪದಾರ್ಥಗಳ ಬೆಲೆಯಂತೂ ಗಗನಕ್ಕೆ ಮುಟ್ಟಿದೆ. ಹಿಂದೆ ಭರವಸೆ ನೀಡಿದ್ದ ಲಕ್ಷಾಂತರ ಉದ್ಯೋಗ ಸೃಷ್ಟಿಯ ಮಾತು ಕನಸಾಗಿದೆ. ಭ್ರಷ್ಟಾಚಾರದ ವಿಷಯದಲ್ಲಂತೂ ದಿವ್ಯ ವೌನ ವಹಿಸಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಬಗ್ಗೆ ಮಾಹಿತಿಗಳಿದ್ದರೂ ಈ ಬಗ್ಗೆ ಧ್ವನಿ ತೆಗೆಯಲಿಲ್ಲ. ಲಲಿತ್ ಮೋದಿ ಪ್ರಕರಣದಲ್ಲಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರ ಬಗ್ಗೆ ಮಾತೇ ಬರಲಿಲ್ಲ. ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ್ ಸಿಂಗ್‌ರ ಮೇಲಿನ 36 ಸಾವಿರ ಕೋಟಿ ರೂ.ನ ಅಕ್ಕಿ ಹಗರಣ, ಮಹಾರಾಷ್ಟ್ರದ ಮಂತ್ರಿಗಳ ಚಾಕ್ಲೇಟ್ ಹಗರಣದ ಆರೋಪದ ಬಗ್ಗೆಯೂ ಮಾತಾಡಲಿಲ್ಲ. ಅಲ್ಲದೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾರಾಜೇ ಮತ್ತು ಅವರ ಪುತ್ರರ ಅರಣ್ಯ ಭೂಮಿ ಹಗರಣಗಳ ಬಗ್ಗೆಯೂ ಧ್ವನಿಯೆತ್ತಲಿಲ್ಲ. ಹೀಗೆ ಅನೇಕ ಭ್ರಷ್ಟಾಚಾರ ಪ್ರಕರಣಗಳು ಬಯಲಾ ದರೂ ಈ ಪ್ರಕರಣಗಳ ಬಗ್ಗೆ ಯಾವ ಕ್ರಮಗಳನ್ನೂ ಕೈಗೊಂಡಂತಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತಿದ್ದರೂ ದೇಶದಲ್ಲಿ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಣದುಬ್ಬರ ಕಡಿಮೆಯಾಗಿಲ್ಲ. ಆದರೂ ಘೋಷಣೆಗಳಿಗೆ ಬರ ಇಲ್ಲ! ವಿದೇಶ ಪ್ರವಾಸ ನಿಲ್ಲುವುದಿಲ್ಲ. ಒಟ್ಟಾರೆ ಎರಡು ವರ್ಷದ ಮೋದಿ ಆಡಳಿತ ಉಳ್ಳವರ ಪಾಲಿಗೆ ಸ್ವರ್ಗಕ್ಕೆ ಸಮಾನವಾದರೆ ಬಡವರ ಪಾಲಿಗೆ ಏನೂ ಸಿಗಲಿಲ್ಲ.





