ನಗರಸಭೆಗೆ ಮೃತದೇಹ ಸಾಗಾಟದ ವಾಹನ ಹಸ್ತಾಂತರ

ಉಡುಪಿ, ಮೇ 30: ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿರುವ ಸರ್ವಧರ್ಮೀಯ ಮುಕ್ತಿ(ಧೀನ ಬಂಧು) ಉಚಿತ ಮೃತದೇಹ ಸಾಗಾಟ ವಾಹನವನ್ನು ಸೋಮವಾರ ಉಡುಪಿ ನಗರಸಭೆಗೆ ಹಸ್ತಾಂತರಿಸಲಾಯಿತು.
ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ವಾಹನದ ಕಡತಗಳನ್ನು ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರಿಗೆ ಹಸ್ತಾಂತರಿಸಿದರು. ಈ ವಾಹನವನ್ನು ಇಂದ್ರಾಳಿಯಲ್ಲಿರುವ ರುದ್ರಭೂಮಿ ನಿರ್ವಹಣಾ ಸಮಿತಿಗೆ ವಹಿಸಿಕೊಡಲಾಗುತ್ತದೆ. ಮುಂದೆ ಅದರ ನಿರ್ವಹಣೆಯನ್ನು ಸಮಿತಿಯೇ ಮಾಡಲಿದೆ. ಕಡುಬಡವರ ಶವವನ್ನು ಉಚಿತವಾಗಿ ಸಾಗಾಟ ಮಾಡಲಾಗು ವುದು. ಅದೇ ರೀತಿ ಕೊರಗ ಸಮುದಾಯದವರಿಗೆ ಉಚಿತ ಸೇವೆ ನೀಡಲು ನಗರಸಭೆ ನಿರ್ಣಯಿಸಿದೆ ಎಂದು ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ, ಉಪಾಧ್ಯಕ್ಷೆ ಸಂಧ್ಯಾತಿಲಕ್‌ರಾಜ್, ಸದಸ್ಯರಾದ ಯುವರಾಜ್, ಜನಾರ್ದನ ಭಂರ್ಡಾಕರ್, ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ್ ಕಾಂಚನ್, ಮಾಜಿ ಅಧ್ಯಕ್ಷರಾದ ಸದಾನಂದ ಬಳ್ಕೂರು, ಜಯ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
20ಲಕ್ಷ ರೂ. ಮೊತ್ತದ ಈಚರ್ ವಾಹನವನ್ನು ಶವ ಸಾಗಾಟಕ್ಕಾಗಿಯೇ ವಿನೂತನಾಗಿ ಸಿದ್ಧಪಡಿಸಲಾಗಿದೆ. ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಸೇರಿದಂತೆ ಸರ್ವಧರ್ಮೀಯರೂ ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಶವ ಸಾಗಿಸುವ ವ್ಯವಸ್ಥೆ ಇದರಲ್ಲಿದೆ. ಹಿಂದೂಗಳ ಶವದ ಚಟ್ಟ ಅಥವಾ ಇತರ ಧರ್ಮೀಯರ ಶವಪೆಟ್ಟಿಗೆಗಳನ್ನು ಇಡಲು ಸೂಕ್ತ ಸ್ಥಾನ ಕಲ್ಪಿಸಲಾಗಿದೆ. ಈ ವಾಹನದ ಒಳಗಡೆ ಆಡಿಯೊ(ಎಂಪಿ 3) ಅಳವಡಿಸಲಾಗಿದ್ದು, ಆಯಾ ಧರ್ಮೀಯರ ಶ್ರದ್ಧೆಗೆ ಅನುಸಾರ ವಾಗಿ ಶವ ಸಾಗಾಟದ ಸಂದರ್ಭದಲ್ಲಿ ಹಿಂದೂಗಳ ದೇವರ ನಾಮಸ್ಮರಣೆ, ಬೈಬಲ್, ಕುರ್‌ಆನ್ ಗ್ರಂಥಗಳ ಸೂಕ್ತಿಗಳನ್ನು ಪಠಿಸಲಾಗುತ್ತದೆ. ಅದೇ ರೀತಿ ಮೂರು ಧರ್ಮಗಳ ಚಿಹ್ನೆಯನ್ನು ವಾಹನ ಮುಂಭಾಗದಲ್ಲಿ ಅಳವಡಿಸಲಾಗಿದೆ.





