ಝೈದಾನ್ ಮ್ಯಾಡ್ರಿಡ್ ಕೋಚ್ ಆಗಿ ಮುಂದುವರಿಯಲಿದ್ದಾರೆ: ಪೆರೆಝ್
ಮ್ಯಾಡ್ರಿಡ್, ಮೇ 30: ರಿಯಲ್ ಮ್ಯಾಡ್ರಿಡ್ ತಂಡ ಯುಇಎಫ್‌ಇ ಚಾಂಪಿಯನ್ಸ್ ಲೀಗ್ ಟ್ರೋಫಿ ಜಯಿಸಲು ಮಾರ್ಗದರ್ಶನ ನೀಡಿರುವ ಝೈನುದ್ದೀನ್ ಝೈದಾನ್ ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ರಿಯಲ್ ಮ್ಯಾಡ್ರಿಡ್ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್ ದೃಢಪಡಿಸಿದರು.
ಜನವರಿಯ ಆರಂಭದಲ್ಲಿ ಉಚ್ಚಾಟಿತ ಕೋಚ್ ರಫೆಲ್ ಬೆನಿಟೆಝ್ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಝೈದಾನ್ ಮೂರು ವರ್ಷ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಜಯಿಸಲು ವಿಫಲರಾದರೆ ಝೈದಾನ್ ಬದಲಿಗೆ ಹಿರಿಯ ಕೋಚ್ ಸೆವಿಲ್ಲಾದ ಯುನೈ ಎರ್ಮೆರಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವದಂತಿ ಹಬ್ಬಿತ್ತು.
ರಿಯಲ್ ಮ್ಯಾಡ್ರಿಡ್ ತಂಡ 11ನೆ ಯುರೋಪಿಯನ್ ಕಪ್ ಜಯಿಸಿರುವುದಕ್ಕೆ ಸಂಭ್ರಮವ್ಯಕ್ತಪಡಿಸಿರುವ ಪೆರೆಝ್, ‘‘ನನಗೆ, ಮ್ಯಾಡ್ರಿಡ್ ಹಾಗೂ ಕ್ಲಬ್‌ಗೆ ಝೈದಾನ್ ಅತ್ಯಂತ ಮುಖ್ಯವೆನಿಸಿದ್ದಾರೆ. ಅವರು 2001ರಲ್ಲಿ ಮ್ಯಾಡ್ರಿಡ್ ಕ್ಲಬ್ ಸೇರಿದಾಗಲೇ ಎಲ್ಲವನ್ನು ಬದಲಿಸಿದ್ದರು. ಅವರು ಆಟಗಾರನಾಗಿ, ಸಹಾಯಕ ಕೋಚ್ ಆಗಿ ಹಾಗೂ ಮೊದಲ ಬಾರಿ ತಂಡದ ಕೋಚ್ ಆಗಿ ಚಾಂಪಿಯನ್ಸ್ ಲೀಗ್‌ನ್ನು ಜಯಿಸಿದ್ದಾರೆ. ಅವರೊಂದಿಗೆ 2018ರ ತನಕ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಲ್ಲಿಯ ತನಕ ಅವರು ತಂದಲ್ಲಿರುತ್ತಾರೆ ಎಂದು ಪೆರೆಝ್ ತಿಳಿಸಿದರು







