ಸುಡು ಬೇಸಿಗೆಯಲ್ಲೂ ತೋಡಿನಲ್ಲಿ ಹರಿಯುತ್ತಿದೆ ನೀರು!

ಮಣಿಪಾಲ, ಮೇ 30: 80 ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ದಶರಥ ನಗರದಿಂದ ಮಣಿಪಾಲಕ್ಕೆ ಸಂಪರ್ಕಿಸುವ ರಸ್ತೆಯಲ್ಲಿರುವ ಅರ್ಬಿ ಸೇತುವೆ ಕೆಳಗಡೆ ಈ ಬೇಸಿಗೆಯಲ್ಲೂ ಶುದ್ಧ ನೀರು ಹರಿಯುತ್ತಿದೆ ಅಲ್ಲದೇ, ಈ ಪರಿಸರದ ಕೆಲವು ಬಾವಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುವುದು ಕಂಡುಬಂದಿದೆ.
ಅರ್ಬಿ ಸೇತುವೆ ಸಮೀಪ ಇರುವ ಕಿಂಡಿ ಅಣೆಕಟ್ಟಿನಿಂದ ಶುದ್ಧ ಕುಡಿಯುವ ನೀರು ಹರಿದು ಹೋಗುತ್ತಿದೆ. ಕೆಲವು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮಳೆ ಬಂದಿದ್ದರೂ ಇಲ್ಲಿಯ ಬಾವಿಯಲ್ಲಿ 3 ಅಡಿಗಳಷ್ಟು ನೀರು ಏರಿಕೆಯಾಗಿದೆ ಎಂದು ಸ್ಥಳೀಯ ಆಟೊರಿಕ್ಷಾ ಚಾಲಕ ವಿಜಯ ಮೊಗವೀರ ತಿಳಿಸಿದ್ದಾರೆ.
ಇಲ್ಲಿ ಶುದ್ಧ ಕುಡಿಯುವ ನೀರು ಪೋಲಾಗುವುದನ್ನು ಕಂಡ ವಾಹನ ಚಾಲಕ ರಾಧಾಕೃಷ್ಣ ಕಾಮತ್ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಅವರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಈ ನೀರನ್ನು ತಡೆದು ಕೃಷಿಗೆ ಬಳಕೆ ಮಾಡುತ್ತಿದ್ದಾರೆ. ಸುಡುಬೇಸಿಗೆಯ ಪ್ರಸಕ್ತ ದಿನಗಳಲ್ಲಿ ಗದ್ದೆ ಪ್ರದೇಶಗಳಲ್ಲಿ ನೀರಿನ ಮಟ್ಟ ಆಳಕ್ಕೆ ಕುಸಿದಿದ್ದರೂ ಇಲ್ಲಿ ನೀರು ಹರಿಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎರಡು ವರ್ಷಗಳ ಹಿಂದೆ ಇದೇ ರೀತಿ ಕೆಳಪರ್ಕಳದಲ್ಲಿ ಬಾವಿ ನೀರು ಏರಿಕೆಯಾಗಿತ್ತಲ್ಲದೆ ತೋಡಿನಲ್ಲೂ ನೀರು ತುಂಬಿ ಹರಿದಿತ್ತು.





