ಡೀಸಲ್ ವಾಹನಗಳು ನಿಮ್ಮಲ್ಲಿ ಎಷ್ಟಿದೆ ಲೆಕ್ಕ ಕೊಡಿ: ಹತ್ತು ರಾಜ್ಯ ಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹುಕುಂ
ಹೊಸದಿಲ್ಲಿ, ಮೇ 31: ಗಂಭೀರ ವಾಯು ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಹದಿನೈದು ನಗರಗಳಲ್ಲಿ ಓಡಾಡುತ್ತಿರುವ ಡೀಸಲ್ ವಾಹನಗಳ ಲೆಕ್ಕ ನೀಡುವಂತೆ ಹತ್ತು ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಮಂಗಳವಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ನೀಡಿದೆ.
ಹತ್ತು ವರ್ಷಗಳಷ್ಟು ಹಳೆಯದಾದ ಡೀಸಲ್ ವಾಹನಗಳು ಅಥವಾ ಎರಡು ಸಾವಿರ ಸಿಸಿ ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳ ಓಡಾಟವನ್ನು ನಿಷೇಧಿಸುವ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ನೇತೃತ್ವದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಪ್ರಧಾನ ಪೀಠ ಮಹಾರಾಷ್ಟ್ರ,ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕೂಡಲೇ ಈ ಬಗ್ಗೆ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಿದೆ.
ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ ಗುರುತಿಸಿರುವ ಅತ್ಯಂತ ಮಲೀನಗೊಂಡಿರುವ ನಗರಗಳ ಪಟ್ಟಿಯಲ್ಲಿ ಮುಂಬೈ, ಕೋಲ್ಕತಾ, ಬೆಂಗಳೂರು, ಪಾಟ್ನಾ, ಲಕ್ನೊ, ಅಲಹಾಬಾದ್, ಕಾನ್ಪುರ, ವಾರಣಾಶಿ, ನಾಗ್ಪುರ, ಚೆನ್ನೈ, ಹೈದರಾಬಾದ್, ಲೂಧಿಯಾನ, ಜಲಂಧರ್, ಅಮೃತಸರ ಮತ್ತು ಪುಣೆ ಸೇರ್ಪಡೆಗೊಂಡಿದೆ.