ಬಂಟ್ವಾಳ: ಅಸಮರ್ಪಕ ಕಸ ವಿಲೇವಾರಿ; ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ಜಾರಿಗೆ ನಿರ್ಧಾರ

ಬಂಟ್ವಾಳ, ಮೇ 31: ಪುರಸಬಾ ವ್ಯಾಪ್ತಿಯಲ್ಲಿ ಅಸಮರ್ಪಕ ಘನ ತ್ಯಾಜ ನಿರ್ವಹಣೆ, ಹೆಚ್ಚುವರಿ ಹಣ ವಸೂಲಿ, ಸಾರ್ವಜನಿಕರು ಮತ್ತು ಸದಸ್ಯರೊಂದಿಗೆ ದುರ್ವರ್ತನೆ, ಮನೆ ಮನೆ ಕಸ ಸಂಗ್ರಹಿಸಲು ಹೋಗದಿರುವ ಆರೋಪದ ಹಿನ್ನೆಲೆಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರ ಎಮ್ಮೆಕೆರೆ ಸಲಾಂಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ಮಂಗಳವಾರ ನಡೆದ ಪುರಸಬಾ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಯಿತು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ದೇವದಾಸ ಶೆಟ್ಟಿ, ಘನ ತ್ಯಾಜ್ಯ ವಿಲೇವಾರಿಗೆ ಪುರಸಭೆಯಿಂದ ಲಕ್ಷಾಂತರ ರೂ.ಟೆಂಡರ್ ನೀಡಲಾಗುತ್ತಿದ್ದರೂ ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಮನೆ ಮನೆ ಕಸ ಸಂಗ್ರಹದಲ್ಲೂ ಪುರಸಭೆ ನಿಗದಿಪಡಿಸಿದಕ್ಕಿಂತ ಎರಡು ಪಟ್ಟು ಹೆಚ್ಚುವರಿಯಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಗುತ್ತಿಗೆದಾರನಿಗೆ ವಾಹನ ಸೇರಿದಂತೆ 3.6 ಲಕ್ಷ ರೂ.ಹೆಚ್ಚುವರಿಯಾಗಿ ಹಣ ಪಾವತಿಸಲಾಗುತ್ತಿದ್ದರೂ ಟೆಂಡರ್ ಒಪ್ಪಂದದಂತೆ ಪೂರ್ತಿ ಕಾರ್ಮಿಕರನ್ನು ನಿಯೋಜಿಸಿ ಕೆಲಸ ಮಾಡುತ್ತಿಲ್ಲ. ಇದರಿಂದ ಕಸ ವಿಲೇವಾರಿ ಅಧೋಗತಿಗೆ ಇಳಿದಿದೆ ಎಂದು ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಯಾಸ್ಮೀನ್, ತಮ್ಮ ಮನೆಗೆ ವಾರಕ್ಕೊಮ್ಮೆ ಕಸ ಸಂಗ್ರಹಿಸಲು ಬರುತ್ತಿದ್ದು, ಈ ಸಂದರ್ಭದಲ್ಲಿ ಪ್ರಶ್ನಿಸಿದಾಗ ಕಸ ಸಂಗ್ರಹಕಾರರು ಬೆದರಿಕೆಯ ರೂಪದಲ್ಲಿ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ದೂರಿದರು.
ಸದಸ್ಯ ಮುಹಮ್ಮದ್ ಇಕ್ಬಾಲ್ ಮಾತನಾಡಿ, ತನ್ನ ವಾರ್ಡ್‌ನಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿ ತಿಂಗಳಿಗೆ ಎರಡು ಬಾರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ತನ್ನ ಆರೋಪಕ್ಕೆ ಪೂರಕವೆಂಬಂತೆ ಹಣ ಪಾವತಿಸಿದ ರಶೀದಿಗಳನ್ನು ಅಧ್ಯಕ್ಷರಿಗೆ ನೀಡಿದರು.
ಈ ಸಂದರ್ಭದಲ್ಲಿ ಅಸಮರ್ಪಕ ಕಸ ವಿಲೇವಾರಿಗೆ ಸಂಬಂಧಿಸಿ ಪಕ್ಷ ಬೇದ ಮರೆತು ಒಗ್ಗಟ್ಟಿನಿಂದ ದ್ವನಿಗೂಡಿಸಿದ ಸರ್ವ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ತಕ್ಷಣ ಈ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ಸುಧಾಕರ್ ತ್ಯಾಜ್ಯ ವಿಲೇವಾರಿಯಲ್ಲಿ ಆಗಿರುವ ಲೋಪವನ್ನು ಒಪ್ಪಿಕೊಂಡು ಮುಂದಿನ 15 ದಿನಗಳ ಒಳಗಾಗಿ ಈ ಕುರಿತಾಗಿ ವಿವರಣೆ ನೀಡುವಂತೆ ಗುತ್ತಿಗೆದಾರನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದರು. ಹಾಗೆಯೇ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ವಿಶೇಷ ಸಭೆಯೊಂದನ್ನು ನಡೆಸಲು ತೀಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಜಿಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಸಪ್ಟಂಬರ್ ತಿಂಗಳಲ್ಲಿ ಇದನ್ನು ಲೋಕಾರ್ಪಣೆ ಮಾಡಲಾಗುವುದು. ಅಲ್ಲಿರುವ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಂಚಾಯತ್ ಕೂಡಾ ಸಹಕರಿಸಿದೆ ಎಂದು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಉತ್ತರಿಸಿದರು.
ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯರಾದ ಗೋವಿಂದ ಪ್ರಭು, ಮುಹಮ್ಮದ್ ಶರೀಫ್, ಜಗದೀಶ್ ಕುಂದರ್, ಗಂಗಾದರ್, ಪ್ರವೀಣ್ ಬಿ., ಭಾಸ್ಕರ್ ಟೈಲರ್, ಸುಗುಣಾ ಕಿಣಿ, ಚಂಚಲಾಕ್ಷಿ, ಬಿ.ಮೋಹನ್, ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಮುನೀಶ್ ಅಲಿ, ಮುಮ್ತಾಝ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಸುಧಾಕರ್ ಕಾರ್ಯಕಲಾಪ ನಡೆಸಿದರು.
ಕತ್ತಲ ಕೂಪದಲ್ಲಿ ಪುರಸಭೆ
ಮೇ 17ರಂದು ಬೀಸಿದ ಬಿರುಗಾಳಿಗೆ ಭಾರೀ ಸಂಖ್ಯೆಯ ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಬೀದಿ ದೀಪಗಳು ಹಾನಿಗೊಂಡಿದ್ದು ಪುರಸಭೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಸಂಪೂರ್ಣ ಕತ್ತಲು ಆವರಿಸಿ ಜನರು ತೊಂದರೆ ಅನುವಿಸುತ್ತಿದ್ದಾರೆ ಎಂದು ಸದಸ್ಯ ದೇವದಾಸ ಶೆಟ್ಟಿ ಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ದ್ವನಿಗೂಡಿಸಿದ ಸರ್ವ ಸದಸ್ಯರು, ಹಾನಿಗೊಳಗಾದ ಬೀದಿ ದೀಪಗಳನ್ನು ಬದಲಿಸುವಂತೆ ಮನವಿ ಮಾಡಿದರೂ ಈವರೆಗೆ ಸರಿಪಡಿಸಿಲ್ಲ. ಈ ಬಗ್ಗೆ ಇಂಜಿನಿಯರ್ ಹಾರಕೆಯ ಉತ್ತರ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.







