ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಶಾಸಕ ಮೊಯ್ದಿನ್ ಬಾವ
ರಾಜ್ಯಸಭೆಗೆ ಜೆಡಿಎಸ್‌ನಿಂದ ಬಿ.ಎಂ. ಫಾರೂಕ್ ಸ್ಪರ್ಧೆ ವಿಚಾರ

ಬೆಂಗಳೂರು, ಮೇ 31: ತನ್ನ ಸಹೋದರ ಬಿ.ಎಂ.ಫಾರೂಕ್ ಜೆಡಿಎಸ್ ಪಕ್ಷದಿಂದ ರಾಜ್ಯಸಭೆಗೆ ಸ್ಪರ್ಧಿಸುವ ವಿಚಾರದಲ್ಲಿ ತನಗೆ ಯಾವುದೇ ರೀತಿಯಾದ ಸಂಬಂಧವಿಲ್ಲ. ಈ ಕುರಿತ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವ ಸವಾಲೆಸೆದಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಾನು ಕಾಂಗ್ರೆಸ್‌ಗೆ ಮೋಸ ಮಾಡುವವನಲ್ಲ. ನನ್ನ ಸಹೋದರ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡುವ ವಿಚಾರದಲ್ಲಿ ತನ್ನ ವಿರೋಧಿಗಳು ವಿನಾಕಾರಣ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು.
ತಾನು, ತನ್ನ ಸಹೋದರ ಫಾರೂಕ್ ಚೆನ್ನಾಗಿಯೇ ಇದ್ದೇವೆ. ನನ್ನ ರಾಜಕೀಯ ಗುರು ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಬೇಡ ಎಂದು ಒತ್ತಡ ಹಾಕಿದೆ. ಪವನ ವಿದ್ಯುತ್ ಯೋಜನೆಗಾಗಿ ನನ್ನ ಸಹೋದರನನ್ನು ಸಿಎಂ ಬಳಿ ಕರೆದುಕೊಂಡು ಹೋಗಿದ್ದೆ. ಇದರಲ್ಲಿ ವೈಯಕ್ತಿಕ ಉದ್ದೇಶವೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯತಿರಿಕ್ತವಾಗಿ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಅಲ್ಲದೆ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್‌ನ ಮಾಜಿ ಶಾಸಕರಾದ ಬಿ.ಎ.ಮೊಯ್ದೀನ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಈ ಹೆಸರನ್ನು ನಾನೇ ಎಂದು ಮಾಧ್ಯಮಗಳು ತಪ್ಪು ಗ್ರಹಿಕೆ ಮಾಡಿ ವರದಿ ಪ್ರಸಾರ ಮಾಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ತನ್ನ ಸಹೋದರನನ್ನು ಕಣಕ್ಕಿಳಿಸುವ ಪ್ರಯತ್ನವನ್ನಾಗಲಿ, ಕುತಂತ್ರವನ್ನಾಗಲಿ ನಾನು ಮಾಡಿಲ್ಲ. ಕೆಲವು ಕುಟುಂಬದ ಸದಸ್ಯರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಹಾಗೇ ನಾವೂ ಬೇರೆ-ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದೇವೆ. ಹೀಗಾಗಿ ಜೆಡಿಎಸ್‌ನಿಂದ ನನ್ನ ಸಹೋದರ ಸ್ಪರ್ಧಿಸುತ್ತಿದ್ದಾನೆ. ಈ ವಿಚಾರದಲ್ಲಿ ನನ್ನ ಪಾತ್ರವೇನು ಇಲ್ಲ. ಇದರಲ್ಲಿ ನನ್ನ ಕೈವಾಡವಿದೆ ಎಂದು ಸಾಬೀತಾದರೆ ಸಾರ್ವಜನಿಕ ಜೀವನದಿಂದ ತಕ್ಷಣವೇ ನಿವೃತ್ತಿ ಪಡೆಯುತ್ತೇನೆ ಎಂದು ಪುನರುಚ್ಚರಿಸಿದರು.
ಸಹೋದರ ಫಾರೂಕ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನನ್ನು ಸ್ವಾಭಾವಿಕವಾಗಿ ಪ್ರಶ್ನೆ ಮಾಡಿದ್ದಾರೆಯೇ ವಿನಃ ಈ ಕುರಿತು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬುದು ನಿರಾಧಾರ. ಈ ಕುರಿತು ಮುಖ್ಯಮಂತ್ರಿಗಳಿಗೆ ಸ್ಪಷ್ಟೀಕರಣ ನೀಡಿದ್ದೇನೆ ಎಂದು ತಿಳಿಸಿದರು.







