ಮಹಾರಾಷ್ಟ್ರದ ಪ್ರಭಾವಿ ಸಚಿವನ ತಲೆಯ ಮೇಲೆ ತೂಗುಗತ್ತಿ

ಮುಂಬೈ,ಮೇ 31: ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯ ಸಂಪುಟದಲ್ಲಿ ನ.2 ಆಗಿರುವ ಏಕನಾಥ ಖಾಡ್ಸೆ ಅವರು ತನ್ನ ವಿರುದ್ಧದ ಭ್ರಷ್ಟಾಚಾರ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ದೂರವಾಣಿಯಲ್ಲಿ ಮಾತನಾಡಿದ ಆರೋಪಗಳ ಹಿನ್ನೆಲೆಯಲ್ಲಿ ತನ್ನ ಸಚಿವಾಲಯವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಅವರ ವಿರುದ್ಧ ಸರಣಿ ಭ್ರಷ್ಟಾಚಾರದ ದೂರುಗಳು ಬಂದಿದು,್ದ ಅವರು ಕಂದಾಯ ಸಚಿವಾಲಯದಂತಹ ಪ್ರಮುಖ ಖಾತೆಯನ್ನು ಕಳೆದುಕೊಳ್ಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ತನ್ಮಧ್ಯೆ ಖಾಡ್ಸೆ ಸೋಮವಾರ ಸಂಜೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಫಡ್ನವೀಸ್ ಈ ಹಿಂದೆಲ್ಲ ಖಾಡ್ಸೆ ಬೆನ್ನಿಗೆ ನಿಂತಿದ್ದರಾದರೂ ಈ ಬಾರಿ ಎಂಐಡಿಸಿ ಪ್ರಕರಣದಿಂದಾಗಿ ಅವರೂ ಸಚಿವರನ್ನು ಬೆಂಬಲಿಸುವ ಸಾಧ್ಯತೆ ಕಡಿಮೆಯೆನ್ನಲಾಗುತ್ತಿದೆ. ಎಂಐಡಿಸಿಗೆಂದು ನಿಗದಿ ಮಾಡಿದ್ದ ಜಮೀನಿನ ಮೇಲೆ ಕಣ್ಣು ಹಾಕಿದ್ದು ಏಕೆ ಎಂದು ಮುಖ್ಯಂತ್ರಿಗಳು ಖಾಡ್ಸೆಯವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಮಾತುಕತೆಗಳ ವಿವರಗಳು ಹೊರಬಿದ್ದಿಲ್ಲವಾದರೂ 12 ಇಲಾಖೆಗಳನ್ನು ಹೊಂದಿರುವ ಖಾಡ್ಸೆ ಬಹುಮುಖ್ಯವಾದ ಕಂದಾಯ ಖಾತೆಗೆ ಎರವಾಗಬಹುದು. ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯ ಬಳಿಕ ಈ ಬಗ್ಗೆ ನಿರ್ಧಾರವೊಂದು ಹೊರಬೀಳಲಿದೆ.
80 ಕೋ.ರೂ.ಗೂ ಅಧಿಕ ವೌಲ್ಯದ ಮೂರು ಎಕರೆ ಎಂಐಡಿಸಿ ಜಮೀನನ್ನು ಖಾಡ್ಸೆ ತನ್ನ ಪತ್ನಿ ಮತ್ತು ಅಳಿಯನ ಹೆಸರಿನಲ್ಲಿ ಕೇವಲ 3.75 ಕೋ.ರೂ.ಗೆ ಖರೀದಿಸಿದ್ದು ಸೇರಿದಂತೆ ಹಲವಾರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಅಲ್ಲದೇ ದಾವೂದ್ ತನ್ನ ಕರಾಚಿಯ ನಿವಾಸದಿಂದ ಖಾಡ್ಸೆಯಯವರ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದ ಎಂದೂ ಆಮ್ ಆದ್ಮಿ ಪಕ್ಷವು ಇತ್ತೀಚಿಗಷ್ಟೇ ಆಪಾದಿಸಿದೆ.





