ದೇ.ಜವರೇಗೌಡರ ನಿಧನಕ್ಕೆ ಸಂತಾಪ

ಮಡಿಕೇರಿ, ಮೇ 31: ನಾಡಿನ ಹಿರಿಯ ಸಾಹಿತಿ, ನಾಡೋಜ ದೇ.ಜವರೇಗೌಡ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ವತಿಯಿಂದ ಸಂತಾಪ ವ್ಯಕ್ತಪಡಿಸಲಾಯಿತು. ಮಂಗಳವಾರ ನಗರದ ಕಸಾಪ ಜಿಲ್ಲಾ ಘಟಕದ ಕಚೇರಿಯಲ್ಲಿ ದೇಜಗೌ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಕುವೆಂಪು ಅವರ ಶಿಷ್ಯರಾಗಿದ್ದ ದೇ.ಜವರೇಗೌಡ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇ.ಜವರೇಗೌಡ ಅವರು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಅವಿರತ ಶ್ರಮವಹಿಸಿದ್ದರು ಎಂದು ಕಸಾಪದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮೇಚಿರ ಸುಭಾಷ್ ನಾಣಯ್ಯ ಸ್ಮರಿಸಿದರು.
ಮೈಸೂರು ವಿವಿಯಲ್ಲಿ ಕನ್ನಡ ಎಂಎ ಪದವಿ ಪಡೆದು ಸಹಾಯಕ ಪ್ರಾಧ್ಯಾಪಕರಾಗಿ, ಮೈಸೂರು ವಿವಿ ಪರೀಕ್ಷಾ ಅಧಿಕಾರಿಯಾಗಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಮೊದಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ದೇ.ಜವರೇಗೌಡರು, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಮೈಸೂರು ವಿವಿ ಕುಲಪತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.ರಾಜ್ಯೋತ್ಸವ, ಹಂಪಿ ಕನ್ನಡ ವಿವಿಯಿಂದ ನಾಡೋಜ, ಬಸವ ರಾಷ್ಟ್ರೀಯ ಪುರಸ್ಕಾರ, ನೃಪತುಂಗ ಪ್ರಶಸ್ತಿ, ಪಂಪ ಮತ್ತಿತರ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಗುಣಗಾನ ಮಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್‌ಕಸಾಪ ಜಿಲ್ಲಾ ಘಟಕದ ರಮೇಶ್, ಕೋಡಿ ಚಂದ್ರಶೇಖರ್, ಕೆ.ಸಿ.ನಂಜುಂಡ ಸ್ವಾಮಿ, ಅಶ್ವತ್ಥ್ ಕುಮಾರ್, ನಾಗರಾಜ ಶೆಟ್ಟಿ, ಗಿರೀಶ್ ಮತ್ತಿತರರು ಹಾಜರಿದ್ದರು. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ದೇ. ಜವರೇಗೌಡ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದೇ.ಜವರೇಗೌಡ ಅವರ ಕನ್ನಡ ಸೇವೆ ಸದಾ ಸ್ಮರಣೀಯ ಎಂದು ತಿಳಿಸಿದ್ದಾರೆ.







