ಸರಕಾರದ ಧೋರಣೆ ಖಂಡಿಸಿ ಮನವಿ
ವೇತನ ತಾರತಮ್ಯ: ಆರೋಪ

ಚಿಕ್ಕಮಗಳೂರು, ಮೇ 31: ಪೊಲೀಸ್ ಸಿಬ್ಬಂದಿ ವೇತನದಲ್ಲಿ ತಾರತಮ್ಯ ಮಾಡುತ್ತಿರುವ ರಾಜ್ಯ ಸರಕಾರದ ಧೋರಣೆ ಖಂಡಿಸಿ ಮಾನವ ಹಕ್ಕುಗಳ ಸಮಿತಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಹಾಗೂ ಅಪರ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಪ್ಪ ನಾಯಕ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಹಗಲು ರಾತ್ರಿ ಎನ್ನದೆ ತಮ್ಮ ಜೀವ ಮುಡುಪಾಗಿಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮೂಲ ಸೌಕರ್ಯ ಒದಗಿಸುವುದು ಸರಕಾರದ ಆದ್ಯ ಕರ್ತವ್ಯ. ಆದರೆ ಸರಕಾರ ಯಾವುದೇ ಅಗತ್ಯ ಸೌಲಭ್ಯ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.
ಸಾರ್ವತ್ರಿಕ ರಜೆ ವಿಷಯ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಸರಕಾರ ಕೂಡಲೆ ವಿವಾದ ಬಗೆಹರಿಸಬೇಕು. ವೇತನದಲ್ಲಿ ಉಂಟಾಗಿರುವ ತಾರತಮ್ಯ ಹಾಗೂ ಮೂಲ ಸೌಕರ್ಯ ಒದಗಿಸುವಲ್ಲಿ ಸೂಕ್ತ ಕ್ರಮವಹಿಸಿ ಪೊಲೀಸರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಕೆ.ರತ್ನಾಕರ್‌ರಾವ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಪ್ರಭು, ಕಾನೂನು ಸಲಹೆಗಾರ ಎಚ್.ಸಿ.ನಟರಾಜ್, ಸಂಘಟನಾ ಕಾರ್ಯದರ್ಶಿ ಟಿ.ಎ.ನಿಂಗೇಗೌಡ, ಸಹ ಕಾರ್ಯದರ್ಶಿಗಳಾದ ನಂಜುಂಡಪ್ಪ, ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.







