ಕಾರವಾರ: ತಂಬಾಕು ರಹಿತ ದಿನಾಚರಣೆ

ಕಾರವಾರ, ಮೇ 31: ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಧೀಶ ಡಿ.ಆರ್.ರೇಣಕೆ ಉದ್ಘಾಟಿಸಿ ಉಪನ್ಯಾಸ ನೀಡಿದರು.
ತಂಬಾಕಿನ ಉತ್ಪನ್ನಗಳಿಂದಾಗುವ ಹಾನಿಯ ಕುರಿತು ಜನ ಜಾಗೃತರಾಗಬೇಕು ಎಂದ ಅವರು, ತಂಬಾಕು ಉತ್ಪನಗಳ ಮಾರಾಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವರ್ಷದಲ್ಲಿ ಒಂದು ದಿನ ಕಾರ್ಯಕ್ರಮ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡುವುದಿಲ್ಲ. ಜನರಲ್ಲೇ ಅದರ ಕುರಿತು ಅರಿವು ಹೆಚ್ಚಿಸಬೇಕು. ತಂಬಾಕು ಬೆಳೆಯ ನಿಷೇಧಿಸಿದದಿಂದ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂಬುದು ಸತ್ಯವಾಗಿದ್ದರೂ ತಂಬಾಕು ಬೆಳೆ ಹಲವರ ಜೀವನ ಹಾಳು ಮಾಡಿದೆ ಎಂಬುದು ಸಹ ಸತ್ಯ ಎಂದರು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್, ಶಿವಕುಮಾರ ಬಿ., ಜೆಎಂಎಫ್‌ಸಿಯ ಸಿವಿಲ್ ನ್ಯಾಯಾಧೀಶ ಮಹೇಶ ಚಂದ್ರಕಾಂತ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಎನ್.ಅಶೋಕಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಮೇಶ ರಾವ್, ವಕೀಲ ಆರ್.ಎಸ್. ಹೆಗಡೆ ತಂಬಾಕು ಸೇವನೆ ಮತ್ತು ಪರಿಸರ ಹಾನಿ ಕುರಿತು ಉಪನ್ಯಾಸ ನೀಡಿದರು. ಆರೋಗ್ಯ ಇಲಾಖೆ ಅಧಿಕಾರಿ ಎಸ್.ಜಿ.ನಾಯ್ಕ ನಿರೂಪಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
.





