ಮರು ಪರೀಕ್ಷೆಗೆ ಆಗ್ರಹಿಸಿ ಧರಣಿ
ಕೆಪಿಎಸ್ಸಿ ಪರೀಕ್ಷಾ ಅಕ್ರಮ

ಶಿವಮೊಗ್ಗ, ಮೇ 31: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ತಕ್ಷಣವೇ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ನೊಂದ ಅಭ್ಯರ್ಥಿಗಳು ಮಂಗಳ ವಾರ ನಗರದ ಡಿ.ಸಿ. ಕಚೇರಿ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದರು. ಅಕ್ಟೋಬರ್ 4, 2015ರಂದು ಪ್ರಥಮ ದರ್ಜೆ ಸಹಾಯಕ ಹುದ್ದೆಯ ಪರೀಕ್ಷೆ ನಡೆಯಿತು. ಆದರೆ ಪರೀಕ್ಷೆಗೆ ಮುನ್ನಾ ದಿನವೇ ಪ್ರಶ್ನೆ ಪತ್ರಿಕೆ ಹಾಗೂ ಕೀ ಉತ್ತರ ಗಳು ಸೋರಿಕೆಯಾಗಿದೆ. ಈ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಕೂಡ ಬಿತ್ತರವಾಗಿದೆ. ಪ್ರಸ್ತುತ ಸಿಐಡಿ ವಶದಲ್ಲಿರುವ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಿಗಳು ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಯಲ್ಲಿಯೂ ಭಾಗಿಯಾಗಿರುವ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ ಎಂದು ಧರಣಿಕಾರರು ದೂರಿದ್ದಾರೆ. ಈ ನಡುವೆ ಕೆಪಿಎಸ್ಸಿ
ಬಿಡುಗಡೆ ಮಾಡಿರುವ 1:2 ಅನುಪಾತದ ಅರ್ಹತಾ ಪಟ್ಟಿಯ ರಿಜಿಸ್ಟರ್ ಸಂಖ್ಯೆ ಪರಿಶೀಲಿಸಿದಾಗ ಅನೇಕ ರಿಜಿಸ್ಟರ್ ಸಂಖ್ಯೆಗಳು ಅನುಕ್ರಮವಾಗಿ ಬಂದಿವೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗಿದೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ ಎಂದು ಧರಣಿಕಾರರು ದೂರಿದ್ದಾರೆ. ಹಲವು ಪರೀಕ್ಷಾ ಕೇಂದ್ರಗಳ ಕೊಠಡಿಯಲ್ಲಿ ಸಾಮೂಹಿಕ ನಕಲು ನಡೆದಿದೆ. ಹಾಗೆಯೇ ಕೆಲವು ಕೇಂದ್ರಗಳಲ್ಲಿ ಕೀ ಉತ್ತರಗಳನ್ನು ಸರಬರಾಜು ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಪರೀಕ್ಷಾ ಅಕ್ರಮ ನಡೆದಿರುವುದು ಬಹುತೇಕ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ ಹಲವು ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತವಾಗುವಂತಾಗಿದೆ. ಇದು ಕೆಪಿಎಸ್ಸಿ ಮಾಡಿದ ದ್ರೋಹವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮತ್ತೊಮ್ಮೆ ಪಾರದರ್ಶಕವಾಗಿ ಮರು ಪರೀಕ್ಷೆ ನಡೆಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವುದರ ಜೊತೆಗೆ ಕೆಪಿಎಸ್ಸಿ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದೆ ಎಂದು ಧರಣಿ ನಿರತರು ಎಚ್ಚರಿಕೆ ನೀಡಿದ್ದಾರೆ.







