ಅಮಾಯಕರಿಗೆ ಶಿಕ್ಷೆ ನೀಡುವುದು ಆತಂಕಕಾರಿ ಬೆಳವಣಿಗೆ: ಇರ್ಶಾದ್ ಅಹ್ಮದ್

ಸೊರಬ, ಮೇ 31: ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ವ್ಯವಸ್ಥೆ ಅಮಾಯಕರನ್ನು ಬಂಧಿಸಿ ಶಿಕ್ಷೆ ಕೊಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮೂವ್‌ಮೆಂಟ್ ಆಫ್ ಜಸ್ಟಿಸ್‌ನ ರಾಜ್ಯ ಕಾರ್ಯಕ್ರಮ ನಿರ್ದೇಶಕ ಇರ್ಶಾದ್ ಅಹ್ಮದ್ ದೇಸಾಯಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ರಾಜ್ಯ ಮೂವ್‌ಮೆಂಟ್ ಆಫ್ ಜಸ್ಟಿಸ್ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅನೇಕ ಅಮಾಯಕರು ಇಂದು ಜೈಲಿನಲ್ಲಿದ್ದಾರೆ. ಆದರೆ, ಅಪರಾಧಿಗಳು ಹೊರಗಡೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇಂತಹ ಕೆಟ್ಟ ಬೆಳವಣಿಗೆಯ ವಿರುದ್ಧ ಸಂಸ್ಥೆ ಹೋರಾಟ ನಡೆಸುತ್ತಿದ್ದು, ಜಾತಿ ಭೇದವಿಲ್ಲದೆ ಶೋಷಣೆಗೆ ಒಳಗಾದವರಿಗೆ ರಕ್ಷಣೆ ನೀಡುವ ಮೂಲಕ ಸೂಕ್ತ ಕಾನೂನು ಸಲಹೆ ಮತ್ತು ಮಾಹಿತಿಯನ್ನು ನೀಡಲಾಗುವುದು ಎಂದರು. ಸೈಬರ್ ಕ್ರೈಮ್ ಕುರಿತು ಆಸೀಫ್ ಹಯಾಝ್ ಮಾತನಾಡಿ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದಾಗಿ ಇಂದು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರು ನಕಲಿ ಖಾತೆಗಳನ್ನು ಸೃಷ್ಟಿಸಿ ಮಹಿಳೆಯರನ್ನು ವಂಚಿಸುತ್ತಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಅನೇಕ ಸುಶಿಕ್ಷಿತರು, ವಿದ್ಯಾವಂತರು ವಂಚನೆಗಳಿಗೆ ಬಲಿಯಾಗಿದ್ದಾರೆಎಂದರು. ಮಾಹಿತಿ ಹಕ್ಕು ಕಾಯ್ದೆಯ ಕುರಿತು ಸಮೀರ್ ಶೇಖ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಜನಸಾಮಾನ್ಯರು ಸರಕಾರದ ಯಾವುದೇ ಇಲಾಖೆಯ ಯೋಜನೆ ಅಥವಾ ಕಾರ್ಯವೈಖರಿಯ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಮಾಹಿತಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಇಲಾಖೆಗಳಲ್ಲಿನ ಭ್ರಷ್ಟರನ್ನು ಸದೆಬಡಿಯುವುದು ಕೇವಲ ಸರಕಾರದ ಕೆಲಸವಾಗಿರದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಮೂವ್‌ಮೆಂಟ್ ಆಫ್ ಜಸ್ಟೀಸ್‌ನ ಜಿಲ್ಲಾಧ್ಯಕ್ಷ ಫಾರೂಕ್ ಅಹ್ಮದ್, ಮುಸ್ತಾಕ್ ಅಹ್ಮದ್, ಬಿ. ಮುಕ್ತಾರ್ ಅಹ್ಮದ್, ಮೆಹಬೂಬ್ ಅಲಿ ಖಾನ್, ಕೆ.ಕೆ. ರಫೀಕ್, ಸಲೀಂ ಅಹ್ಮದ್, ಸೈಯದ್ ಅಹ್ಮದ್‌ವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.





