ಮೆಸ್ಸಿ ವಿರುದ್ಧ ತೆರಿಗೆ ವಂಚನೆ ಆರೋಪ: ಬಾರ್ಸಿಲೋನ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

ಮ್ಯಾಡ್ರಿಡ್, ಮೇ 31: ಐದು ಬಾರಿ ವರ್ಷದ ವಿಶ್ವದ ಆಟಗಾರ ಪ್ರಶಸ್ತಿ ವಿಜೇತ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ಅವರ ತಂದೆಯ ವಿರುದ್ಧ ಸ್ಪೇನ್‌ನಲ್ಲಿ ಮಿಲಿಯನ್ ಯುರೋಸ್ ತೆರಿಗೆ ಹಣ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಯು ಮಂಗಳವಾರ ಬಾರ್ಸಿಲೋನದಲ್ಲಿ ಆರಂಭವಾಗಿದೆ.
ಅರ್ಜೆಂಟೀನದ ಸ್ಟ್ರೈಕರ್ ಮೆಸ್ಸಿ ಹಾಗೂ ಅವರ ತಂದೆ ಜಾರ್ಜ್ ಹಾರಾಸಿಯಾ ಮೆಸ್ಸಿ ಮಂಗಳವಾರ ವಿಚಾರಣೆಗೆ ಹಾಜರಾದರು. ಈ ಇಬ್ಬರು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದಾರೆ. ಮೆಸ್ಸಿ ಹಾಗೂ ಅವರ ತಂದೆ ಇಮೇಜ್ ರೈಟ್‌ಗಳಿಂದ ಬಂದಿರುವ ಆದಾಯದಲ್ಲಿನ ತೆರಿಗೆ ಹಣವನ್ನು ಶೆಲ್ ಕಂಪೆನಿಯ ಸ್ಥಾಪನೆಗೆ ಬಳಸಿದ್ದರು. ಈ ವಿಷಯ ಮೆಸ್ಸಿಗೆ ಗೊತ್ತಿತ್ತು ಎಂದು ಈ ಹಿಂದಿನ ತೀರ್ಪಿನಲ್ಲಿ ಕೋರ್ಟ್ ಹೇಳಿತ್ತು.
2007 ಹಾಗೂ 2009ರ ನಡುವೆ ಮೆಸ್ಸಿ ಹಾಗೂ ಅವರ ತಂದೆ ಸರಕಾರಕ್ಕೆ 4.2 ಮಿಲಿಯನ್ ಯುರೋಸ್(4.67 ಮಿಲಿಯನ್ ಡಾಲರ್) ವಂಚಿಸಿದ್ದರು ಎಂದು 2013ರಲ್ಲಿ ಸ್ಪೇನ್‌ನ ತೆರಿಗೆ ವಿಭಾಗದ ಅಧಿಕಾರಿಗಳು ಆರೋಪಿಸಿದ್ದರು.
ಪ್ಯಾಸಿಕ್ಯೂಟರ್ ಕಚೇರಿಯ ಪ್ರಕಾರ, ಮೆಸ್ಸಿ ಹಾಗೂ ಅವರ ತಂದೆ ತೆರಿಗೆ ಹಣವನ್ನು ವಂಚಿಸಿ ಉರುಗ್ವೆ, ಬೆಲಿಝ್, ಸ್ವಿಟ್ಝರ್‌ಲೆಂಡ್ ಹಾಗೂ ಇಂಗ್ಲೆಂಡ್‌ನಲ್ಲಿ ಕಂಪೆನಿ ಸ್ಥಾಪಿಸಿದ್ದು ಸಾಬೀತಾದರೆ 22 ತಿಂಗಳಿಗೂ ಅಧಿಕ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಜೂ.2013ರಲ್ಲಿ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತವಾಗಿ ತನಿಖೆಗೊಳಪಟ್ಟಿದ್ದ ಮೆಸ್ಸಿ ಹಾಗೂ ಅವರ ತಂದೆ ಐದು ಮಿಲಿಯನ್ ಯುರೋಸ್‌ನ್ನು ದಂಡವಾಗಿ ಪಾವತಿಸಿದ್ದರು.







