ನಿರಾಶ್ರಿತರನ್ನು ಸ್ವೀಕರಿಸುವ ಬದಲು ದಂಡ ನೀಡಿದ ಸ್ವಿಝರ್‌ಲ್ಯಾಂಡ್ ಗ್ರಾಮ
ಲಂಡನ್, ಮೇ 31: ಯುರೋಪ್‌ನ ದೇಶಗಳು ಇಂತಿಷ್ಟು ವಲಸಿಗರನ್ನು ಸ್ವೀಕರಿಸಬೇಕು ಎಂಬ ಕೋಟವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಆದರೆ, ಖಂಡದ ಅತ್ಯಂತ ಶ್ರೀಮಂತ ದೇಶಗಳ ಪೈಕಿ ಒಂದಾಗಿರುವ ಸ್ವಿಝರ್‌ಲ್ಯಾಂಡ್‌ನ ಅತ್ಯಂತ ಶ್ರೀಮಂತ ಗ್ರಾಮವೊಂದು ತನ್ನ ಪಾಲಿನ 10 ನಿರಾಶ್ರಿತರನ್ನು ಸ್ವೀಕರಿಸುವ ಬದಲು ಎರಡು ಲಕ್ಷ ಪೌಂಡ್ (ಸುಮಾರು 2 ಕೋಟಿ ರೂಪಾಯಿ) ದಂಡ ಕಟ್ಟಲು ಮುಂದಾಗಿದೆ.
ರಮಣೀಯ ಓಬರ್‌ವಿಲ್-ಲಿಯಲಿ ಗ್ರಾಮದಲ್ಲಿರುವ 22,000 ನಿವಾಸಿಗಳ ಪೈಕಿ 300 ಕೋಟ್ಯಧೀಶರು. ನಿರಾಶ್ರಿತರನ್ನು ಸ್ವೀಕರಿಸಬೇಕೇ ಎಂಬ ವಿಷಯದಲ್ಲಿ ನಡೆದ ಜನಮತಗಣನೆಯಲ್ಲಿ ಗ್ರಾಮದ ನಿವಾಸಿಗಳು ‘ಬೇಡ’ ಎಂಬುದಕ್ಕೆ ಮತಹಾಕಿದ್ದಾರೆ.
ಈಗ ಈ ಗ್ರಾಮದ ನಿವಾಸಿಗಳು ‘ಜನಾಂಗೀಯವಾದಿಗಳು’ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.
ಆದರೆ, ಈ ಆರೋಪವನ್ನು ಗ್ರಾಮದ ಮೇಯರ್ ಆ್ಯಂಡ್ರಿಯಸ್ ಗ್ಲಾರ್ನರ್ ನಿರಾಕರಿಸುತ್ತಾರೆ.
‘‘ನಿರಾಶ್ರಿತರು ಸಿರಿಯದವರೇ ಅಥವಾ ಬೇರೆ ದೇಶಗಳ ಆರ್ಥಿಕ ವಲಸಿಗರೇ ಎಂಬುದು ನಮಗೆ ಗೊತ್ತಾಗುವುದಿಲ್ಲ. ಸಿರಿಯ ನಿರಾಶ್ರಿತರಿಗೆ ಸಹಾಯ ಮಾಡಬೇಕು, ನಿಜ. ಆದರೆ, ಅವರ ದೇಶಕ್ಕೆ ಸಮೀಪದ ಶಿಬಿರಗಳಲ್ಲಿ ಈ ರೀತಿಯ ಸಹಾಯವನ್ನು ಚೆನ್ನಾಗಿ ಮಾಡಬಹುದಾಗಿದೆ. ಅದಕ್ಕೆ ಈ ಹಣವನ್ನು ಬಳಸಬಹುದಾಗಿದೆ’’ ಎಂದು ಅವರು ಹೇಳುತ್ತಾರೆ.







