ಪಾಕ್ ಪ್ರಧಾನಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ
ಇಸ್ಲಾಮಾಬಾದ್, ಮೇ 31: ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಯಶಸ್ವಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ಅವರ ಪುತ್ರಿ ತಿಳಿಸಿದರು. ಇದು ಐದು ವರ್ಷಗಳ ಅವಧಿಯಲ್ಲಿ ಅವರಿಗೆ ನಡೆಸಲಾದ ಎರಡನೆ ಹೃದಯ ಶಸ್ತ್ರಚಿಕಿತ್ಸೆ.
‘‘ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು’’ ಎಂದು ಅವರ ಪುತ್ರಿ ಮರ್ಯಮ್ ಶಸ್ತ್ರಚಿಕಿತ್ಸೆ ಆರಂಭಗೊಂಡ ಸುಮಾರು ನಾಲ್ಕೂವರೆ ತಾಸುಗಳ ಬಳಿಕ ಟ್ವಿಟರ್‌ನಲ್ಲಿ ಪ್ರಕಟಿಸಿದರು.
66 ವರ್ಷದ ಶರೀಫ್ 1990ರ ದಶಕದಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದರು. ಬಳಿಕ 1999ರ ಕ್ಷಿಪ್ರಕ್ರಾಂತಿಯಲ್ಲಿ ಅವರನ್ನು ಉಚ್ಚಾಟಿಸಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಝ್ ಮುಶರ್ರಫ್ ಅಧಿಕಾರಕ್ಕೆ ಬಂದಿದ್ದರು. ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಅವರು 2007ರಲ್ಲಿ ಪಾಕಿಸ್ತಾನಕ್ಕೆ ವಾಪಸಾದರು. 2013ರ ಚುನಾವಣೆಯಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬಂದು ಅವರು ಮತ್ತೆ ಪ್ರಧಾನಿಯಾದರು. ಅವರು 2011ರಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರಿಂದ ಉಂಟಾದ ಅಡ್ಡಪರಿಣಾಮವೊಂದನ್ನು ನಿವಾರಿಸುವುದಕ್ಕಾಗಿ ಈಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.





