ಒಬಾಮ ಅವರ ಹಿರೋಶಿಮಾ ಭೇಟಿ: ಸಂತ್ರಸ್ತರ ಗಾಯಕ್ಕೆ ಬರೆ

ಹಿರೋಶಿಮಾ ಮತ್ತು ನಾಗಸಾಕಿ ಇವೆರಡೂ ವಿಶ್ವ ಮರೆಯಲಾಗದ ಕಪ್ಪು ಘಳಿಗೆಗಳ ಹೆಸರು. ಈ ವಿಶ್ವವನ್ನು ಯಾವ ದಿಕ್ಕಿಗೆ ಕೊಂಡೊಯ್ಯಬಾರದು ಎನ್ನುವುದಕ್ಕೆ ನಮಗಿರುವ ಇತಿಹಾಸದ ಪಾಠ ಹಿರೋಶಿಮಾ ಮತ್ತು ನಾಗಸಾಕಿ. ಜಪಾನ್‌ನನ್ನು ಸರ್ವನಾಶ ಮಾಡಬೇಕು ಎನ್ನುವ ಒಂದೇ ಕಾರಣಕ್ಕಾಗಿ 1945ರ ಆಗಸ್ಟ್‌ನಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಅಮೆರಿಕ ಅಣುಬಾಂಬನ್ನು ಸುರಿಯಿತು.ಸುಮಾರು ಎರಡೂವರೆ ಲಕ್ಷ ಮಂದಿ ಅಮೆರಿಕದ ಕ್ರೌರ್ಯಕ್ಕೆ ಬಲಿಯಾದರು. ಲಕ್ಷಾಂತರ ಮಂದಿ ಗಾಯಗೊಂಡರು. ಈ ವಿಸ್ಫೋಟವನ್ನು ನಡೆಸಿದ ಎಷ್ಟೋ ದಶಕಗಳ ಬಳಿಕವೂ ಅದರ ಪರಿಣಾಮವನ್ನು ಆ ನಾಡಿನ ಜನರು ಅನುಭವಿಸುತ್ತಲೇ ಬಂದರು. ಇಂದಿಗೂ ಆ ಗಾಯ ಮಾಗಿಲ್ಲ.
ಅಮೆರಿಕ ಇದಾದ ಬಳಿಕ ನೂರಾರು ಹತ್ಯಾಕಾಂಡಗಳನ್ನು ನಡೆಸಿಕೊಂಡು ಬಂದಿದೆಯಾದರೂ, ಅದರ ಮುಖದಲ್ಲಿ ಎದ್ದು ಕಾಣುವ ಗಾಯಗಳು ಹಿರೋಶಿಮಾ ಮತ್ತು ನಾಗಸಾಕಿ ಹತ್ಯಾಕಾಂಡ. ಈ ಹತ್ಯಾಕಾಂಡದಿಂದ ಅಮೆರಿಕ ಪಾಠವಂತೂ ಕಲಿಯಲಿಲ್ಲ. ಬದಲಿಗೆ ಹತ್ಯಾಕಾಂಡವನ್ನು ಸಮರ್ಥನೀಯವಾಗಿ ಹೇಗೆ ನಡೆಸಿಕೊಂಡು ಹೋಗಬಹುದು ಎನ್ನುವುದರ ಕುರಿತಂತೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೋಯಿತು. ಇರಾಕ್, ಅಫ್ಘಾನಿಸ್ತಾನ, ಸಿರಿಯಾ ಮೊದಲಾದೆಡೆ ಸತ್ತಿರುವ, ಸಾಯುತ್ತಿರುವ ಜನಗಳಿಗೆ ಹೋಲಿಸಿದರೆ ಹಿರೋಶಿಮಾ ಮತ್ತು ನಾಗಸಾಕಿ ತೀರಾ ಸಣ್ಣದು. ಒಂದು ವೇಳೆ, ಅಮೆರಿಕ ತನ್ನ ಹತ್ಯಾಕಾಂಡಗಳಿಗೆ ಕ್ಷಮೆ ಯಾಚಿಸುತ್ತಾ ಹೋಗುವುದಾದರೆ, ಅಲ್ಲಿನ ಅಧ್ಯಕ್ಷರು ಅದಕ್ಕಾಗಿಯೇ ಜಗತ್ತಿನಾದ್ಯಂತ ಒಂದು ವರ್ಷ ವಿಶೇಷ ಪ್ರವಾಸವನ್ನು ಹಮ್ಮಿಕೊಳ್ಳಬೇಕಾಗಬಹುದು.
ಶಾಂತಿ ನೊಬೆಲ್ ಪಡೆದ ಒಬಾಮ ಹಿರೋಶಿಮಾ ಮತ್ತು ನಾಗಸಾಕಿಗೆ ಐತಿಹಾಸಿಕ ಭೇಟಿಯನ್ನು ನೀಡಿದಾಗ, ಖಂಡಿತವಾಗಿಯೂ ವಿಶ್ವದ ಮುಂದೆ ಈ ಹತ್ಯಾಕಾಂಡಕ್ಕಾಗಿ ಕ್ಷಮೆ ಯಾಚಿಸುತ್ತಾರೆ ಎಂದು ಜಗತ್ತು ನಿರೀಕ್ಷಿಸಿತ್ತು. ಆ ಮೂಲಕ ಈ ಭೇಟಿ ವಿಶ್ವಕ್ಕೆ ಹೊಸ ಸಂದೇಶವನ್ನು ನೀಡುತ್ತದೆ ಎಂದೂ ಆಶಿಸಿತ್ತು. ಆದರೆ ಜಗತ್ತಿನ ನಿರೀಕ್ಷೆ ಹುಸಿಯಾಗಿದೆ. ಒಬಾಮ ಶಾಂತಿದೂತನ ವೇಷದಲ್ಲಿದ್ದ ಅಮೆರಿಕದ ರಾಜಕಾರಣಿಯಾಗಿಷ್ಟೇ ಕಾಣಿಸಿಕೊಂಡರು. ಹಿರೋಷಿಮಾದ ಜನರ ಮುಂದೆ ನಿಜವಾದ ಶಾಂತಿಯನ್ನು ಪ್ರತಿಪಾದಿಸುವ ಮನುಷ್ಯನಾಗಿ ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾದರು. ಈ ದುರಂತದಿಂದ ತನಗೆ ದುಃಖವಾಗಿದೆ ಎನ್ನುವುದನ್ನು ಅವರು ಕಾವ್ಯಾತ್ಮಕವಾಗಿ ಬಣ್ಣಿಸಿದರು. ಮನುಷ್ಯ ಮಾಡಬೇಕಾದ ಕೃತ್ಯಗಳಿಗೆ ವಿಮುಖನಾಗುವ ಸಂದರ್ಭ ಬಂದಾಗ, ಆತ ಬಣ್ಣದ ಮಾತುಗಳಿಗೆ ಮರೆಹೋಗುತ್ತಾನೆ. ಒಬಾಮ ಅದನ್ನೇ ಮಾಡಿದರು. ಅವರ ದುಃಖ ಮೊಸಳೆ ಕಣ್ಣೀರಾಗಿತ್ತು. ನಾಗಸಾಕಿ-ಹಿರೋಷಿಮಾ ಜನರು ತಮ್ಮಿಂದ ನಿಜಕ್ಕೂ ನಿರೀಕ್ಷಿಸುತ್ತಿರುವುದು ಏನು ಎನ್ನುವುದು ಒಬಾಮಗೆ ಅರಿವಿತ್ತು. ಅದನ್ನು ಕೊಡುವ ಶಕ್ತಿಯೂ ಅವರಿಗಿತ್ತು. ಆದರೆ ಅಮೆರಿಕದ ಮೇಲರಿಮೆ ಅದಕ್ಕೆ ಅವಕಾಶ ನೀಡಲಿಲ್ಲ.
ದೊಡ್ಡ ಪದಗಳನ್ನು ಬಳಸುತ್ತಾ ವಿಶ್ವದ ಮುಂದೆ ಅವರು ಸಣ್ಣವರಾಗುತ್ತಾ ಹೋದರು. ಒಬಾಮಾ ಹೇಳುತ್ತಾರೆ: ‘‘ಎಪ್ಪತ್ತು ವರ್ಷಗಳ ಹಿಂದೆ ಮೋಡ ರಹಿತ ಶುಭ್ರ ಮುಂಜಾನೆಯ ಸಮಯದಲ್ಲಿ ಆಕಾಶದಿಂದ ಸಾವು ಬೀಳಲಾರಂಭಿಸಿತು ಮತ್ತು ಇಡೀ ವಿಶ್ವವೇ ಬದಲಾಯಿತು. ಒಂದು ಬೆಳಕಿನ ಕಿಡಿ ಮತ್ತು ಬೆಂಕಿಯ ಗೋಡೆ ಇಡೀ ನಗರವನ್ನು ಧ್ವಂಸಗೊಳಿಸುವ ಮೂಲಕ ಮಾನವಕುಲ ತನ್ನನ್ನೇ ಸರ್ವನಾಶ ಮಾಡುವ ಸಾಧನಗಳನ್ನೂ ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿತು’’
ಈ ಸಾಹಿತ್ಯಕ ಮಾತುಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಬಾಮ ಹಿರೋಷಿಮಾಕ್ಕೆ ಭೇಟಿ ನೀಡಬೇಕಾಯಿತೇ? ಈ ಮೂಲಕ ಪದಗಳ ಮರೆಯಲ್ಲಿ ಒಬಾಮ ಆತ್ಮವಂಚನೆ ಮಾಡಿಕೊಂಡಿದ್ದಾರೆ. ಒಬಾಮ ವಿವರಿಸುವ ವರ್ಣನೆಯಾಚೆಗೆ ಭೀಕರತೆಯನ್ನು ಅನುಭವಿಸಿದವರು ಅಲ್ಲಿನ ಜನರು. ಅವರಿಗೆ ಅದರ ಮರು ನಿರೂಪಣೆಯ ಅಗತ್ಯವಿದ್ದಿರಲಿಲ್ಲ. ಒಬಾಮಾ ಹೇಳುತ್ತಾರೆ: ‘‘ನಾವೀಗ ಹಿರೋಶಿಮಾಕ್ಕೆ ಬಂದಿರುವುದಾದರೂ ಯಾಕೆ? ತೀರಾ ಹಳೆಯದಲ್ಲದ ಕ್ರೂರ ಶಕ್ತಿಯ ಬಗ್ಗೆ ವಿಚಾರ ಮಾಡಲು ನಾವಿಲ್ಲಿಗೆ ಬಂದಿದ್ದೇವೆ. ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿ ಹತ್ತು ಲಕ್ಷಕ್ಕೂ ಅಧಿಕ ಜಪಾನಿಯರು, ಸಾವಿರಕ್ಕೂ ಅಧಿಕ ಕೊರಿಯನ್ನರು ಮತ್ತು ಜೈಲಿನಲ್ಲಿದ್ದ ಡಜನ್‌ಗಟ್ಟಲೆ ಅಮೆರಿಕನ್ನರಿಗೆ ಶ್ರದ್ಧಾಂಜಲಿ ಕೋರಲು ನಾವಿಲ್ಲಿಗೆ ಆಗಮಿಸಿದ್ದೇವೆ’’
‘‘ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಭೀಕರವಾಗಿ ಕೊನೆಯಾದ ವಿಶ್ವಯುದ್ಧ ಜಗತ್ತಿನ ಸಂಪದ್ಭರಿತ ಮತ್ತು ಶಕ್ತಿಶಾಲಿ ದೇಶಗಳ ಮಧ್ಯೆ ನಡೆದಿತ್ತು. ಅವರ ನಾಗರಿಕತೆಯು ಜಗತ್ತಿಗೆ ಉತ್ತಮ ನಗರಗಳನ್ನು ಮತ್ತು ಭವ್ಯವಾದ ಕಲೆಯನ್ನು ನೀಡಿದೆ. ಅವುಗಳ ದಾರ್ಶನಿಕರು ನ್ಯಾಯ ಮತ್ತು ಸೌಹಾರ್ದತೆ ಮತ್ತು ಸತ್ಯದ ಪ್ರತಿಪಾದನೆ ಮಾಡಿದ್ದಾರೆ. ಆದರೆ ಅದೇ ಮೂಲದಿಂದ ಯುದ್ಧವು ಆರಂಭವಾಯಿತು. ಸಣ್ಣಸಣ್ಣ ಬುಡಕಟ್ಟುಗಳ ನಡುವೆ ಪ್ರಭುತ್ವ ಅಥವಾ ಅಧಿಕಾರ ಸಾಧಿಸುವ ಗುಣದ ಪರಿಣಾಮವಾಗಿ ಸಂಘರ್ಷ ನಡೆಯುತ್ತದೆ. ಈ ಬಾರಿ ಅದೇ ಹಳೆಯ ಮರುಕಳಿಕೆ ಹೊಸ ಸಾಧನಗಳೊಂದಿಗೆ ಆದರೆ ಹೊಸ ನಿರ್ಬಂಧಗಳಿಲ್ಲದೆ ನಡೆದು ಹೋಯಿತು’’
‘‘ಆದರೆ ಅಣಬೆಯಂತೆ ಆಕಾಶದೆತ್ತರಕ್ಕೆ ಎದ್ದ ಹೊಗೆಯ ಮೋಡ ಮಾನವತೆಯ ಮೂಲ ವಿರೋಧಾಭಾಸವನ್ನು ತೀಕ್ಷ್ಣವಾಗಿ ನೆನಪಿಸಿತ್ತು. ನಮ್ಮನ್ನು ಒಂದು ಜೀವರಾಶಿಯಾಗಿ ಸೃಷ್ಟಿಸಿದ, ನಮ್ಮಲ್ಲಿ ಯೋಚನೆ, ಕಲ್ಪನೆ, ಭಾಷೆ, ವಸ್ತುಗಳನ್ನು ನಿರ್ಮಿಸುವ ಪ್ರತಿಭೆ, ಪ್ರಕೃತಿಗಿಂತ ನಮ್ಮನ್ನು ಬೇರೆಯಾಗಿಸುವ ಮತ್ತು ಅದನ್ನು ನಮಗೆ ಬೇಕಾದಂತೆ ಮಾರ್ಪಡಿಸುವ ಸಾಮರ್ಥ್ಯವನ್ನು ನೀಡುವ ಅದೇ ಕಿಡಿ ನಮ್ಮಲ್ಲಿ ಸರಿಸಮಾನವಲ್ಲದೆ ಇರುವ ವಿನಾಶವನ್ನು ಸೃಷ್ಟಿಸುವ ಸಾಮರ್ಥ್ಯವನ್ನೂ ನೀಡಿದೆ.’’
ಮೇಲಿನ ಮಾತುಗಳಲ್ಲಿ ಒಬಾಮ ನುಣುಚಿಕೊಳ್ಳುವಿಕೆಯನ್ನು ಗುರುತಿಸಬಹುದು. ಹಿರೋಶಿಮಾ ದುರಂತವನ್ನು ಅದನ್ನು ಇನ್ನಿತರ ಸಾವುಗಳ ಜೊತೆಗೆ ಹೋಲಿಕೆ ಮಾಡುತ್ತಾ, ಅಮೆರಿಕರ ಸಾವನ್ನೂ ಅದಕ್ಕೆ ಜೋಡಿಸುತ್ತಾ, ವಸ್ತು ಸ್ಥಿತಿಯಿಂದ ದೂರವುಳಿಯುತ್ತಾರೆ. ಅಷ್ಟೇ ಅಲ್ಲ, ಅಮೆರಿಕಕ್ಕೂ ಈ ಹತ್ಯಾಕಾಂಡಕ್ಕೂ ನೇರ ಸಂಬಂಧವಿರುವುದನ್ನು ಮರೆಮಾಚಿ ಅವರು ಮಾತನಾಡುತ್ತಾರೆ. ಇಲ್ಲಿ, ಈ ಕೃತ್ಯಕ್ಕೆ ಅಮೆರಿಕ ಎಷ್ಟರಮಟ್ಟಿಗೆ ನೇರ ಹೊಣೆಗಾರ ಎನ್ನುವುದರಿಂದಲೂ ದೂರ ಉಳಿಯುತ್ತಾರೆ. ಒಂದೆಡೆ ಅಮೆರಿಕದಂಥಾ ಪರಮಾಣು ಬಾಂಬ್ ಸಂಗ್ರಹ ಹೊಂದಿರುವ ರಾಷ್ಟ್ರಗಳು ಭಯದಿಂದ ಆಚೆ ಬಂದು ಈ ಅಣ್ವಸ್ತ್ರಗಳು ಇಲ್ಲದಂಥಾ ಜಗತ್ತನ್ನು ಸೃಷ್ಟಿಸಲು ಮುಂದಾಗಬೇಕು ಎಂದೂ ಹೇಳುತ್ತಾರೆ.
ಈ ಮೂಲಕ, ಅಮೆರಿಕದ ಅಣು ಸಂಗ್ರಹಗಳಿಗೆ ಸಮರ್ಥನೆಯನ್ನು ನೀಡುತ್ತಾರೆ. ಇದೇ ಸಂದರ್ಭದಲ್ಲಿ, ಒಂದು ಭದ್ರವಾದ ಪರಮಾಣು ರಕ್ಷಣಾ ಶೃಂಗವನ್ನು ಯಾಕೆ ಸಾಧಿಸಲಾಗಿಲ್ಲ? ರಷ್ಯಾ ಈ ಬಾರಿ ಎನ್‌ಎಸ್‌ಎಸ್‌ನಲ್ಲಿ ಯಾಕಿಲ್ಲ? ಅಮೆರಿಕ ಯಾಕೆ ಪಾಕಿಸ್ತಾನ, ಇಸ್ರೇಲ್ ಮೊದಲಾದ ರಾಷ್ಟ್ರಗಳಿಗೆ ನೂತನ ಅಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸುವುದಿಲ್ಲ? ಎನ್ನುವ ಪ್ರಶ್ನೆಗಳಿಗೆ ಅವರ ಬಣ್ಣದ ಮಾತುಗಳಲ್ಲಿ ಉತ್ತರಗಳಿಲ್ಲ.
ಹಿರೋಷಿಮಾ ನೆಲದ ಮೇಲೆ ನಿಂದು ಅವರು ಆಡಿದ ಅಷ್ಟೂ ಮಾತುಗಳೂ, ಒಣ ಶಬ್ದಗಳಾಗಿವೆ. ಹಿರೋಶಿಮಾ, ನಾಗಸಾಕಿಯ ನೆಲದಲ್ಲಿ ಬೀಜವಾಗಿ ಬಿದ್ದು ಮೊಳಕೆ ಒಡೆಯುವ ಶಕ್ತಿ ಅದಕ್ಕಿಲ್ಲ. ಇವೆಲ್ಲದರ ಬದಲಿಗೆ ಆ ದುರಂತದ ಹೊಣೆ ಹೊತ್ತು ಒಬಾಮ ಅಲ್ಲಿನ ಸಂತ್ರಸ್ತರ ಕ್ಷಮೆಯಾಚನೆ ಮಾಡಿದ್ದಿದ್ದರೆ ಅದು ವಿಶ್ವಕ್ಕೆ ಒಂದು ದೊಡ್ಡ ಸಂದೇಶವಾಗಿ ಬಿಡುತ್ತಿತ್ತು. ಆ ಕ್ಷಮೆಯಾಚನೆ, ಒಬಾಮರ ಉಳಿದ ಮಾತುಗಳಿಗೆ ವಿಶ್ವಾಸಾರ್ಹತೆಯನ್ನು ತಂದುಕೊಡುತ್ತಿತ್ತು. ವಿಷಾದನೀಯ ಸಂಗತಿಯೆಂದರೆ ಒಬಾಮ ಕ್ಷಮೆಯಾಚನೆಯನ್ನು ಮಾಡಲಿಲ್ಲ. ಯಾಕೆಂದರೆ, ಆಳದಲ್ಲಿ ತಾನು ಮಾಡಿರುವ ಕೃತ್ಯದ ಕುರಿತಂತೆ ಅಮೆರಿಕಕ್ಕೆ ಪಶ್ಚಾತ್ತಾಪವಿಲ್ಲ. ಜೊತೆಗೆ, ವರ್ತಮಾನದಲ್ಲಿ ಜಗತ್ತಿನಲ್ಲಿ ನಡೆಯುತ್ತಿರುವ ಹತ್ಯಾಕಾಂಡಗಳಿಂದ ವಿಮುಖವಾಗಲು ಅದು ಸಿದ್ಧವಿಲ್ಲ. ಒಬಾಮ ಭೇಟಿ ಮತ್ತು ಅವರ ಕೃತಕ ಮಾತುಗಳು ಹಿರೋಶಿಮಾ ಮತ್ತು ನಾಗಸಾಕಿ ದುರಂತಕ್ಕೆ ಬಲಿಯಾದವರಿಗೆ ಮಾಡಿದ ಅವಮಾನವಾಗಿದೆ. ಅಲ್ಲಿನ ಜನರ ಗಾಯದ ಮೇಲೆ ಬರೆ ಎಳೆದು ಒಬಾಮ ಅಮೆರಿಕಕ್ಕೆ ವಾಪಸಾಗಿದ್ದಾರೆ.







