ರಜನಿಕಾಂತ್ ಗೆ ಸಾಟಿ ಯಾರು ?
ಬಿಡುಗಡೆಗೆ ಮುನ್ನವೇ 200 ಕೋಟಿ ರೂಪಾಯಿ ಬಾಚಿದ ಕಬಾಲಿ
ಚೆನ್ನೈ, ಜೂ.1 : ಸೂಪರ್ ಸ್ಟಾರ್ ರಜನೀಕಾಂತ್ ಅವರ ಈ ಹಿಂದಿನ ಚಿತ್ರ ‘ಲಿಂಗಾ’ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲವಾದರೂ ಅವರ ಮುಂಬರುವ ಚಿತ್ರ ‘ಕಬಾಲಿ’ ಬಿಡುಗಡೆಗೆ ಮುನ್ನವೇ 200 ಕೋಟಿ ರೂಪಾಯಿ ಬಾಚಲು ತಯಾರಾಗಿ, ಚಿತ್ರ ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ. ಪಾ. ರಂಜಿತ್ ಅವರ ನಿರ್ದೇಶನದ ಹಾಗೂ ವಿ ಕ್ರಿಯೇಶನ್ಸ್ ನ ಕಲೈಪುಲಿ ತನು ಅವರ ನಿರ್ಮಾಣದ ಈ ಚಿತ್ರದ ಹೆಸರು ಈಗಾಗಲೇ ಮನೆಮಾತಾಗಿ ಹೋಗಿದೆ.
ದಿ ಹಿಂದೂ ವರದಿಯೊಂದರ ಪ್ರಕಾರ ಚಿತ್ರ ಬಿಡುಗಡೆಗೆ ಮುನ್ನವೇ ಪ್ರದರ್ಶನ ಹಕ್ಕು, ಪ್ರಚಾರ ಒಪ್ಪಂದ ಹಾಗೂ ಮರ್ಚಂಡೈಸ್ ಮಾರಾಟ ಮೂಲಕ ರೂ 200 ಕೋಟಿ ಬಾಚಲಿದೆ. ಚಿತ್ರದ ಟ್ರೈಲರನ್ನು ಈಗಾಗಲೇ ಯೂಟ್ಯೂಬಿನಲ್ಲಿ 20 ಮಿಲಿಯಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರಲ್ಲದೆ ಅದರ ಆಡಿಯೋ ಹಕ್ಕುಗಳನ್ನು ಥಿಂಕ್ ಇಂಡಿಯಾ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಕರ್ನಾಟಕ ಚಿತ್ರಮಂದಿರಗಳಲ್ಲಿ ಚಿತ್ರದ ಪ್ರದರ್ಶನ ಹಕ್ಕನ್ನು ಲಿಂಗಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ದಾಖಲೆ ದರಕ್ಕೆ ಮಾರಾಟ ಮಾಡಲಾಗಿದೆ.
ಚಿತ್ರದ ತೆಲುಗು ಡಬ್ಬಿಂಗ್ ಹಕ್ಕುಗಳನ್ನೂ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗುವುದೆಂದು ತಿಳಿದು ಬಂದಿದೆ. ಹಿಂದಿ ಡಬ್ಬಿಂಗ್ ಹಕ್ಕು ಪಡೆಯಲು ಇಬ್ಬರು ಬಾಲಿವುಡ್ ಚಿತ್ರ ವಿತರಕರು ಈಗಾಗಲೇ ಚೆನ್ನೈನಲ್ಲಿ ಬೀಡು ಬಿಟ್ಟಿದ್ದಾರೆ. ಫ್ರಾನ್ಸಿನಲ್ಲಿ ಚಿತ್ರದ ವಿತರಣಾ ಹಕ್ಕನ್ನು ಇತರ ಯಾವುದೇ ನಟರ ಚಿತ್ರಗಳಿಗೆ ಯುರೋಪಿನಲ್ಲಿ ದೊರೆಯುವ ಮೊತ್ತಕ್ಕಿಂತ ಎರಡು ಪಟ್ಟು ಮೊತ್ತಕ್ಕೆ ಮಾರಾಟವಾಗಿದೆ.
ಇತ್ತ ಹಾಂಕ್ ಕಾಂಗ್ ಮೂಲದ ಕಂಪೆನಿಯೊಂದು ಚೀನೀ ಡಬ್ಬಿಂಗ್ ಹಕ್ಕಿಗಾಗಿ ದೊಡ್ಡ ಮೊತ್ತವನ್ನು ನೀಡುವ ಪ್ರಸ್ತಾಪ ಮಾಡಿದೆಯೆಂದೂ ವರದಿಯಂದು ತಿಳಿಸಿದೆ. ಸಾಧಾರಣವಾಗಿ ಬಾಲಿವುಡ್ ಚಿತ್ರ ಕೂಡ ಚೀನಾದಲ್ಲಿ ಬಿಡುಗಡೆ ಭಾಗ್ಯ ಪಡೆಯುವುದು ಕಷ್ಟಕರವಾಗಿರುವಾಗ ‘ಕಬಾಲಿ’ ನಿಜವಾಗಿಯೂ ದೊಡ್ಡ ಸಾಧನೆ ಮಾಡಿದೆಯೆಂದೇ ಹೇಳಬಹುದು.
ಇತ್ತೀಚಿಗಿನ ಮಾಹಿತಿಯ ಪ್ರಕಾರ ‘ಕಬಾಲಿ’ ಚಿತ್ರ ಬಿಡುಗಡೆ ದಿನಾಂಕವು ನಿಗದಿತ ದಿನಾಂಕಕ್ಕಿಂತ ಒಂದು ವಾರ ಮುಂದೂಡಲ್ಪಟ್ಟಿದೆ. ವಿಶ್ವದಾದ್ಯಂತ ಚಿತ್ರ ಜುಲೈ 1ರಂದು ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಪ್ರಸಕ್ತ ಅಮೇರಿಕಾದಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ರಜನೀಕಾಂತ್ ಅವರೇ ಚಿತ್ರ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆಂದು ಹೇಳಲಾಗುತ್ತಿದೆ. ಭಾರತೀಯ ಚಿತ್ರವೊಂದು ವಿಶ್ವಮಟ್ಟದಲ್ಲಿ ಈ ಪರಿಯಾಗಿ ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದ್ದು ಒಟ್ಟು 5,000 ಚಿತ್ರಮಂದಿರಗಳಲ್ಲಿ ಅದು ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ.