ಪೆಟ್ರೋಲ್ ಡೀಸೆಲ್ ದರ ಹೆಚ್ಚಳ : ದೇಶಾದ್ಯಂತ ಪ್ರತಿಭಟನೆಯ ಧ್ವನಿ!
ಹೊಸದಿಲ್ಲಿ, ಜೂನ್1: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಬೆಲೆ ವೈಪರೀತ್ಯಗಳಿಗೆ ತಕ್ಕಂತೆ ಜನರಿಗೆ ಪ್ರಯೋಜನ ಒದಗಿಸಲಾಗುವುದು ಎಂದು ಹೇಳಿ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಣವನ್ನು ಭಾರತ ಸರಕಾರ ತೆಗೆದು ಹಾಕಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆಯಾದಾಗಲೂ ಅದರ ಲಾಭವನ್ನು ಅನುಭವಿಸದಂತೆ ಭಾರತೀಯರನ್ನು ವಂಚಿಸಲಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಕಡಿಮೆ ಆಗುತ್ತಿದ್ದಾಗಲೂ ಇಲ್ಲಿ ಪೆಟ್ರೋಲ್ ಬೆಲೆ ಅನುದಿನ ಹೆಚ್ಚುತ್ತಲೇ ಇತ್ತು. ಈಗ ಕಚ್ಚಾ ತೈಲಕ್ಕೆ ಮತ್ತೆ ಬೆಲೆಹೆಚ್ಚಿದೆ. ಅದುಕೂಡಾ ಭಾರತದಲ್ಲಿ ರಾಕೆಟ್ವೇಗದಲ್ಲಿ ತೈಲಬೆಲೆಯಲ್ಲಿ ಹೆಚ್ಚಳವಾಗಿದೆ.
ಪೆಟ್ರೋಲ್ಗೆ 2.58ರೂಪಾಯಿ ಮತ್ತು ಡೀಸೆಲ್ಗೆ 2.26 ರೂಪಾಯಿ ದರ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಾಗಲೂ ಇಲ್ಲಿನ ತೈಲ ಕಂಪೆನಿಗಳು ದರ ಇಳಿಕೆ ಮಾಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಎರಡು ವಾರ ಮೊದಲು ಪೆಟ್ರೋಲ್ಗೆ 83ಪೈಸೆಯನ್ನೂ ಡೀಸೆಲ್ಗೆ 1.26ಪೈಸೆಯನ್ನೂ ಹೆಚ್ಚಿಸಲಾಗಿತ್ತು. ಈಗ ಪುನಃ ಹೆಚ್ಚಿಸಲಾಗಿದೆ. ಈ ಸಲದ ಭಾರೀ ಬೆಲೆಹೆಚ್ಚಳಕ್ಕೆ ದೇಶಾದ್ಯಂತ ಪ್ರತಿಭಟನೆ ಧ್ವನಿ ಕೇಳಿಸುತ್ತಿದೆ ಎಂದು ವರದಿಯಾಗಿದೆೆ. ಏಶ್ಯನ್ ರಾಷ್ಟ್ರಗಳಲ್ಲೇ ಭಾರತದಲ್ಲಿ ತೈಲಬೆಲೆ ಅತಿಹೆಚ್ಚು ಇದೆ. ಪಾಕಿಸ್ತಾನ ಕೂಡಾ ಭಾರತಕ್ಕಿಂತ ಕಡಿಮೆ ಬೆಲೆಗೆ ತೈಲವನ್ನು ಗ್ರಾಹಕರಿಗೆ ನೀಡುತ್ತಿದೆ. ಭಾರತದಲ್ಲಿ ತೈಲ ಶುದ್ಧೀಕರಣದ ಖರ್ಚಿನೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ತೆರಿಗೆ ವಿಧಿಸುತ್ತಿರುವ ಕಾರಣದಿಂದಾಗಿ ಭಾರತದಲ್ಲಿ ಗ್ರಾಹಕ ಪೆಟ್ರೋಲ್, ಡೀಸೆಲ್ಗಳಿಗೆ ಹೆಚ್ಚು ಬೆಲೆ ತೆರಬೇಕಾದ ಸ್ಥಿತಿ ಎದುರಿಸುತ್ತಿದ್ದಾನೆ. ತೈಲಬೆಲೆ ಕಡಿಮೆ ಆದಾಗ ಅದರ ಲಾಭವನ್ನು ಜನರಿಗೆ ನೀಡಲಿಲ್ಲ.ಆಗ ತೆರಿಗೆಯನ್ನು ಹೆಚ್ಚಿಸಿ ತನ್ನ ಖಜಾನೆಯನ್ನು ಕೇಂದ್ರ ಸರಕಾರ ತುಂಬಿಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಬೆಲೆ ಏರಿಕೆಯಾದ ಪರಿಣಾಮ ಭಾರತದ ರೂಪಾಯಿ ಮತ್ತು ಡಾಲರ್ಗಳ ಮೌಲ್ಯಗಳಲ್ಲಿ ವ್ಯತ್ಯಾಸವಾಗಿ ತೈಲಕ್ಕೆ ದರ ಹೆಚ್ಚಳಗೊಳಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಹೇಳಿಕೊಂಡಿದೆ. ಮೇ ತಿಂಗಳೊಂದರಲ್ಲೇ ಅದು ಎರಡನೆ ಬಾರಿಗೆ ತೈಲದರ ಹೆಚ್ಚಿಸಿದೆ