ಮೋದಿಯನ್ನು ಬೆಂಬಲಿಸಿದ್ದಕ್ಕೆ ಜನರ ಕ್ಷಮೆ ಕೋರಿದ ರಾಮ್ ಜೇಠ್ಮಲಾನಿ

ನವದೆಹಲಿ : ಬಿಹಾರದ ಮಹಾಮೈತ್ರಿಕೂಟದ ವತಿಯಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕಪ್ಪು ಹಣದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದ್ದಾರಲ್ಲದೆ ಕಳೆದ ಲೋಕಸಭಾ ಚುನಾವಣೆ ವೇಳೆಗೆ ಮೋದಿಯನ್ನು ಬೆಂಬಲಿಸಿದ್ದಕ್ಕಾಗಿ ಜನರಿಂದ ಕ್ಷಮೆ ಕೋರಿದ್ದಾರೆ.
‘‘ವಿದೇಶೀ ಬ್ಯಾಂಕುಗಳಲ್ಲಿ ಭಾರತೀಯರು ಅಡಗಿಸಿಟ್ಟಿರುವ ರೂ 90 ಕೋಟಿ ಕಪ್ಪು ಹಣವನ್ನು ದೇಶಕ್ಕೆ ಹಿಂದೆ ತಂದು ಪ್ರತಿಯೊಂದು ಬಡ ಮನುಷ್ಯನ ಕುಟುಂಬಕ್ಕೆ ರೂ 15 ಲಕ್ಷ ನೀಡುವುದಾಗಿ ಅವರು ಆಶ್ವಾಸನೆ ನೀಡಿದ್ದರು. ಆದರೆ ಅವರು ನೇಮಕ ಮಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಅವರ ಈ ಹೇಳಿಕೆ ಕೇವಲ ಒಂದು ಚುನಾವಣಾ ಜುಮ್ಲಾ (ಗಿಮ್ಮಿಕ್) ಎಂದರು,’’ಎಂದು ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಜೇಠ್ಮಲಾನಿಹೇಳಿದರು.
ಮೋದಿ ಹಾಗೂ ಬಿಜೆಪಿಯನ್ನು ಈ ಹಿಂದೆ ಬೆಂಬಲಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ ಅವರು ‘‘ನಾನು ನಿಮ್ಮನ್ನು ವಂಚಿಸಲು ಅವರಿಗೆ ಸಹಾಯ ಮಾಡಿದೆ ಎಂದುಒಪ್ಪಿಕೊಳ್ಳುತ್ತೇನೆ. ನಿಮ್ಮೆಲ್ಲರ ಕ್ಷಮೆ ಯಾಚಿಸಲು ನಾನು ಬಂದಿದ್ದೇನೆ. ನಿಮ್ಮಿಂದ (ಮೋದಿಯಿಂದ) ನನಗೆ ಏನೇನೂ ಬೇಕಾಗಿಲ್ಲ ಆದರೆ ದೇಶದ ಜನರಿಗೆ ನೀಡಿದ ಆಶ್ವಾಸನೆಗಳನ್ನು ನೀವು ಈಡೇರಿಸಬೇಕು,’’ಎಂದು ಹೇಳಿದರು.





