ದ.ಕ.ಸ. ಹಾಲು ಉತ್ಪಾದಕರ ಒಕ್ಕೂಟದಿಂದ ಉಚಿತ ಹಾಲು ವಿತರಣೆ
ವಿಶ್ವ ಹಾಲು ದಿನಾಚರಣೆ

ಮಂಗಳೂರು, ಜೂ. 1: 16ನೆ ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ವಾಮಂಜೂರು ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಬುಧವಾರ ಉಚಿತ ನಂದಿನಿ ಸುವಾಸಿತ ಹಾಲು ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ದೈನಂದಿನ ಜೀವನದಲ್ಲಿ ರೈತರ ಅವಶ್ಯಕತೆ ಸಾಕಷ್ಟಿದೆ. ದ.ಕ. ಜಿಲ್ಲೆಯಲ್ಲಿ ಸುಮಾರು 4.5ರಿಂದ 5 ಲಕ್ಷ ಲೀಟರ್‌ನಷ್ಟು ಹಾಲು ಡೈರಿಗೆ ಮಾರಾಟ ಮಾಡಲಾಗುತ್ತಿದ್ದು, 1 ಲಕ್ಷದ 20 ಸಾವಿರ ಹೈನುಗಾರಿಕೆ ನಡೆಸುತ್ತಿರುವ ಸದಸ್ಯರು ಹಾಲು ಉತ್ಪಾದಕರ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದ್ದಾರೆ ಎಂದರು.
ಸುಮಾರು 680 ಸಂಘಗಳು ಈ ಪ್ರಕ್ರಿಯೆಯಲ್ಲಿ ಕೈ ಜೋಡಿಸುತ್ತಿದ್ದು, ದಿನದ 24 ಗಂಟೆಯೂ ಹಾಲಿನ ವಿವಿಧ ಉತ್ಪನ್ನಗಳ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು. ಮಕ್ಕಳು ಹಾಗೂ ಯುವಜನತೆಯ ಮೆದುಳು, ನರಕೋಶ, ಎಲುಬು ಸೇರಿದಂತೆ ದೈಹಿಕ ಬೆಳವಣಿಗೆಯಲ್ಲಿ ಹಾಲು ಪರಿಪೂರ್ಣವಾದ ಆಹಾರ ಎಂದವರು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಅವರು ಮಾತನಾಡಿ, ಹಾಲು ವಿಶ್ವ ಆಹಾರವೆಂದು ಅಂತಾರಾಷ್ಟ್ರೀಯ ಆಹಾರ ಮತ್ತು ಕೃಷಿ ಸಂಸ್ಥೆಯಿಂದ ಘೋಷಿಸಲ್ಪಟ್ಟಿದೆ ಎಂದರು.
ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಸ್ಥ ಅಶೋಕ್ ಕುಮಾರ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಾ. ಕೆ.ಎಂ.ಲೋಹಿತೇಶ್ವರ, ಯೋಜನಾಧಿಕಾರಿ ಪುನೀತ್ ಶೆಟ್ಟಿ, ಮರಿಯಾ ಮಸ್ಕರೇನ್ಹಸ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿಗಳಿಗೆ ನಂದಿನಿ ಸಂಸ್ಥೆಯಿಂದ ಉತ್ಪಾದಿತ ಹಾಲಿನ ವಿವಿಧ ಉತ್ಪನ್ನಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.
ದ.ಕ. ಹಾಲು ಒಕ್ಕೂಟಕ್ಕೆ ಸೋಲಾರ್ ಘಟಕ ಅಳವಡಿಕೆ ಚಿಂತನೆ
ಕುಲಶೇಖರ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲೂ ಸೋಲಾರ್ ಘಟಕ ಅಳವಡಿಕೆಗೆ ಚಿಂತನೆ ನಡೆಸಲಾಗಿದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ತಂತ್ರಜ್ಞರನ್ನು ಭೇಟಿಯಾಗಿ ಸೋಲಾರ್ ಘಟಕಗಳ ಬಗ್ಗೆ ಅಭಿಪ್ರಾಯ ಪಡೆಯಲಾಗಿದ್ದು, 6 ತಿಂಗಳೊಳಗೆ ಸೋಲಾರ್ ಅಳವಡಿಕೆ ಮಾಡಲಾಗುವುದು ಎಂದು ಕುಲಶೇಖರ ನಂದಿನಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಡೈರಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ್ಯಾಕ್ಟರಿಗೆ 1250 ಕಿಲೋವ್ಯಾಟ್ ವಿದ್ಯುತ್ ಅವಶ್ಯಕತೆಯಿದ್ದು, ಇದರಲ್ಲಿ ಸೋಲಾರ್ ಅಳವಡಿಕೆ ಮೂಲಕ 250 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಿ ಅದನ್ನು ್ಲೆಕ್ಸಿ ಪ್ಯಾಕ್ ಘಟಕಕ್ಕೆ ಬಳಕೆ ಮಾಡಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ 2 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.







