ಸರಕಾರಿ ಆಡಳಿತ ಅವ್ಯವಸ್ಥೆ ಸರಿಪಡಿಸಲು ಒತ್ತಾಯ: ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಪುತ್ತೂರು, ಜೂ. 1: ಪುತ್ತೂರಿನ ಮಿನಿವಿಧಾನಸೌಧ ಕಚೇರಿಯ ಸದ್ಭಳಕೆ ಮಾಡುವ ಮೂಲಕ ಸರಕಾರಿ ಹಣ ದುರ್ವ್ಯಯವಾಗುತ್ತಿರುವುದನ್ನು ತಡೆಯಬೇಕು. ಸರಕಾರಿ ಆಡಳಿತ ವ್ಯವಸ್ಥೆಗೆ ಚರುಕುಮಟ್ಟಿಸುವ, ನಗರ ಸಭೆಯ ಕಚೇರಿ ಅವ್ಯವಸ್ಥೆಯನ್ನು ಸರಿಪಡಿಸುವ, ನಗರದಲ್ಲಿ ಸೂಕ್ತ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಕೆಲಸವಾಗಬೇಕೆಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬುಧವಾರ ಪುತ್ತೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಪುತ್ತೂರು ತಾಲೂಕು ಕೇಂದ್ರದಲ್ಲಿ ಒಂದೇ ಕಡೆ ಎಲ್ಲಾ ಸರಕಾರಿ ಸೇವೆಗಳು ಲಭ್ಯವಾಗುವ ನಿಟ್ಟಿನಲ್ಲಿ ಮಿನಿವಿಧಾನಸೌಧ ನಿರ್ಮಿಸಲಾಗಿದ್ದರೂ, ಅದರಲ್ಲಿ ಸಾಕಷ್ಟು ಸ್ಥಳಾವಕಾಶಗಳಿದ್ದರೂ ಕೃಷಿ, ಅಬಕಾರಿ,ಕಾರ್ಮಿಕ ಇಲಾಖೆ, ಮಾಪನಾ ಇಲಾಖೆ, ಅಳತೆ ಮತ್ತು ತೂಕ ಮೊದಲಾದ ಹಲವು ಇಲಾಖೆಗಳು ಬೇರೆ ಬೇರೆ ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಬಾಡಿಗೆ ನೀಡಿ ಕಾರ್ಯಾಚರಿಸುತ್ತಿವೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೂ ಅನಗತ್ಯ ಖರ್ಚಾಗುತ್ತಿದೆ. ಈ ಎಲ್ಲಾ ಸರಕಾರಿ ಕಚೇರಿಗಳನ್ನು ಕೂಡಲೇ ಮಿನಿವಿಧಾನ ಸೌಧಕ್ಕೆ ಸ್ಥಳಾಂತರಿಸಿ ಸಾರ್ವಜನಿಕರಿಗೆ ಒಂದೇ ಕಡೆ ಎಲ್ಲಾ ಸೇವೆಗಳು ಸಿಗುವಂತೆ ಕ್ರಮಕೈಗೊಳ್ಳುವ ಮೂಲಕ ಸರಕಾರಿ ಹಣ ವ್ಯರ್ಥವಾಗಿ ಪೋಲಾಗುವುದನ್ನು ತಡೆಯಬೇಕು ಎಂದು ಪ್ರತಿಟನಾಕಾರರು ಆಗ್ರಹಿಸಿದ್ದಾರೆ.
ಸರಕಾರದ ಎಲ್ಲಾ ಕಚೇರಿಗಳಲ್ಲಿಯೂ ಗುಣಮಟ್ಟದ ಸೇವೆ ದೊರೆಯುತ್ತಿಲ್ಲ. ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರನ್ನು ಸತಾಯಿಸುವ ,ಪರೋಕ್ಷವಾಗಿ ಮಧ್ಯವರ್ತಿಗಳ ಮೂಲಕ ಭ್ರಷ್ಟಾಚಾರವನ್ನು ಪ್ರೇರೇಪಿಸುವ ಕೆಲಸ ನಡೆಯುತ್ತಿದ್ದು, ಸರಕಾರಿ ನೌಕರರಿಗೆ ಚುರುಕು ಮಟ್ಟಿಸುವ ಮೂಲಕ ಜನಸಾಮಾನ್ಯರಿಗೆ ಎಲ್ಲಾ ಕಚೇರಿಗಳಲ್ಲಿ ವಿಳಂಬರಹಿತ ಸೇವೆ ನೀಡಲು ಕ್ರಮಕೈಗೊಳ್ಳಬೇಕು.
ಪುತ್ತೂರು ನಗರ ಸಭೆಯ ಕಚೇರಿ ಅವ್ಯವಸ್ಥೆಯಿಂದ ಕೂಡಿದ್ದು, ಸುಮಾರು 800 ಖಾತಾ ಬದಲಾವಣೆ ಅರ್ಜಿಗಳು ನೆನೆಗುದಿಗೆ ಬಿದ್ದಿವೆ. ಕುಂಟು ನೆಪ ಹೇಳಿ ನಗರಸಭೆಯ ನೌಕರರು ವ್ಯವಸ್ಥಿತವಾಗಿ ಜನಸಾಮಾನ್ಯರನ್ನು ಅಲೆದಾಡಿಸುತ್ತಿದ್ದು, ಸಾರ್ವಜನಿಕರ ಅರ್ಜಿಗಳ ಜರೂರು ಇತ್ಯರ್ಥಕ್ಕಾಗಿ ಮತ್ತು ನೌಕರರು ಸರಿಯಾಗಿ ಕೆಲಸ ಮಾಡುವಂತೆ ಆಗಲು ಕಚೇರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದು, ಸೂಕ್ತ ನಿರ್ದೇಶನ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಪುತ್ತೂರು ನಗರದಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಂಚಾರ ತೊಡಕು ನಿವಾರಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಗಲೀಕರಿಸುವ ಅವಶ್ಯಕತೆಯಿದೆ. ಖಾಸಗಿ ವಾಹನಗಳ ನಿಲುಗಡೆಗೆ ಯಾವುದೇ ಸಮರ್ಪಕ ವ್ಯವಸ್ಥೆಯಿಲ್ಲ. ಏಕಮುಖ ಸಂಚಾರ ರಸ್ತೆಗಳ ನಿಯಮದಲ್ಲೂ ಬಿಗುಧೋರಣೆ ಇಲ್ಲದಾಗಿದೆ. ಅಪ್ರಾಪ್ತ ವಯಸ್ಸಿನವರು ದ್ವಿಚಕ್ರ ವಾಹನಗಳಲ್ಲಿ ಅತೀ ವೇಗದಲ್ಲಿ ಓಡಾಡುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಸುವ್ಯವಸ್ಥೆಗೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಅಗ್ನಿಶಾಮಕ ಠಾಣೆಯಲ್ಲಿ 13 ಸಿಬ್ಬಂದಿ ಇರಬೇಕಾಗಿದ್ದರೂ 6 ಸಿಬ್ಬಂದಿಯ ಕೊರತೆಯಿರುವುದರಿಂದ ಅನಾಹುತಗಳ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣವೇ ಸಿಬ್ಬಂದಿ ಕೊರತೆ ನೀಗಿಸಲು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಜಯಕರ್ನಾಟಕ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮನವಿ ಓದಿದರು. ತಹಶೀಲ್ದಾರ್ ಪುಟ್ಟು ಶೆಟ್ಟಿ ಮನವಿ ಸ್ವೀಕರಿಸಿದರು.
ಪುತ್ತೂರು ತಾಲೂಕು ಘಟಕದ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರಸನ್ನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ಗೌಡ , ಕಾರ್ಯದರ್ಶಿಗಳಾದ ಜಯಪ್ರಕಾಶ್ ಬದಿನಾರು, ರಫೀಕ್, ತಾಲೂಕು ಯುವ ಘಟಕದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ನಗರ ಘಟಕದ ಶರತ್ ಆಳ್ವ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ ಹರೀಶ್, ಕಾರ್ಯದರ್ಶಿ ರೇಖಾ ಯಶೋಧರ್, ಸಂಘಟನೆಯ ಪ್ರಮುಖರಾದ ,ರೋಶನ್ ಶೆಟ್ಟಿ, ಇಸಾಕ್ ಸಾಲ್ಮರ , ಅಬ್ದುಲ್ ರಹಿಮಾನ್ ಈಶ್ವರಮಂಗಲ, ನಾಗೇಶ್, ಸುಂದರ ಸಾಲ್ಯಾನ್,ತೀರ್ಥಕಲಾ , ಪುಷ್ಪಾ ಗಂಗಾಧರ್, ಉಷಾ ಬಾಬು ರಾವ್ ಮತ್ತಿತರರು ಇದ್ದರು.
ಮುಖ್ಯಮಂತ್ರಿಗೆ ಮನವಿ
ರಾಜ್ಯದ ಪೊಲೀಸರ ನ್ಯಾಯಯುತ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸಿ,ಅನ್ಯರಾಜ್ಯಗಳಲ್ಲಿ ಪೊಲೀಸರು ಪಡೆಯುತ್ತಿರುವ ಸರಿಸಮಾನ ವೇತನ ಭತ್ಯೆ ಸಹಿತ ಉತ್ತಮ ಸೇವಾಭದ್ರತೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.







