ಬಾಲವನ ಡಾ. ಕಾರಂತರ ಮನೆ ಪುನಶ್ಚೇತನ: ಪ್ರಥಮ ಹಂತದ ಕಾಮಗಾರಿ ಪೂರ್ಣ

ಪುತ್ತೂರು, ಜೂ. 1: ಕಳೆದ ಹಲವು ವರ್ಷಗಳಿಂದ ತೀರಾ ನಾದುರಸ್ತಿಯಲ್ಲಿದ್ದು ಪ್ಲಾಸ್ಟಿಕ್ ಟರ್ಪಾಲ್ ಹೊದಿಸಿಕೊಂಡು, ಬೀಳುವ ಹಂತದಲ್ಲಿದ್ದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಸಾಹಿತ್ಯ, ಚಟುವಟಿಕೆಯ ಕೇಂದ್ರವಾಗಿದ್ದ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿರುವ ಮನೆಯ ಮೂಲ ಸ್ವರೂಪ ಉಳಿಸಿಕೊಂಡು ಪುನಶ್ಚೇತನಗೊಳಿಸುವ ಕಾಮಗಾರಿಯಲ್ಲಿ ಒಂದು ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಮನೆಯ ಮಾಡಿಗೆ ಹಂಚಿನ ಹೊದಿಕೆಯಾಗುವುದರೊಂದಿಗೆ ಮಳೆಗಾಲಕ್ಕೆ ಮುನ್ನವೇ ಮನೆ ಟರ್ಪಾಲು ಮುಕ್ತಗೊಂಡಿದೆ. ಬಾಲವನದಲ್ಲಿರುವ ಡಾ.ಕಾರಂತರ ಮನೆ ಕಳೆದ ಕೆಲ ವರ್ಷಗಳ ಹಿಂದೆಯೇ ಶಿಥಿಲಗೊಂಡಿತ್ತು. ಮನೆಯ ಮಾಡು ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಹಿನ್ನಲೆಯಲ್ಲಿ ಕಳೆದ ಮಳೆಗಾಲದಲ್ಲಿ ಮಾಡಿಗೆ ಟರ್ಪಾಲು ಹೊದಿಸಿ ರಕ್ಷಿಸಬೇಕಾದ ಅನಿವಾರ್ಯತೆ ಬಂದಿತ್ತು. ಕೆಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರಂತರ ಮನೆಯ ಪುನಶ್ಚೇತನ ಕಾಮಗಾರಿಗೆ ಈ ವರ್ಷದ ಆರಂಭದಲ್ಲೇ ಚಾಲನೆ ದೊರಕಿದೆ.
ಈ ಮಳೆಗಾಲಕ್ಕೆ ಮುನ್ನವೇ ಡಾ.ಕಾರಂತರ ಮನೆಯನ್ನು ಮೂಲ ಸ್ವರೂಪದಲ್ಲೇ ಪುನಶ್ಚೇತನಗೊಳಿಸುವ ಮೊದಲ ಹಂತದ ಕಾಮಗಾರಿ ನಡೆದಿದೆ. ಇದೀಗ ಮನೆಯ ಮೇಲ್ಛಾವಣಿ ಕೆಲಸ ಪೂರ್ಣಗೊಂಡಿದ್ದು, ಮನೆಯ ಮಾಡಿಗೆ ಹಂಚು ಏರುವುದರೊಂದಿಗೆ ಟರ್ಪಾಲ್‌ನಿಂದ ಮುಕ್ತಿ ದೊರಕಿದೆ.
ಡಾ. ಕಾರಂತರ ಮನೆಯ ಪುನಶ್ಚೇತನ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ಇಂಟ್ಯಾಕ್ ಸಂಸ್ಥೆಯವರು ಒಪ್ಪಂದದ ಪ್ರಕಾರ ಕಳೆದ ಮಾ.31ರೊಳಗೆ ಮನೆಯ ಮೇಲ್ಛಾವಣಿ ಮಾಡಿನ ಕೆಲಸ ಪೂರ್ಣಗೊಳಿಸಿ, ಉಳಿದ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಿ ಬಿಟ್ಟು ಕೊಡಬೇಕಾಗಿತ್ತು. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದ ಪರಿಣಾಮವಾಗಿ ಕಳೆದ ವಾರದ ಅಂತ್ಯಕಷ್ಟೇ ಮೇಲ್ಛಾವಣಿ ಕೆಲಸ ಮಾಡಿ ಹಂಚು ಹೊದಿಸುವ ಕೆಲಸ ಮುಗಿದಿತ್ತು.
ಕಾಮಗಾರಿ ವಹಿಸಿಕೊಂಡಿದ್ದ ಇಂಟ್ಯಾಕ್ ಸಂಸ್ಥೆಯ ಸಮನ್ವಯಗಾರ ಅರವಿಂದ್ ಮತ್ತು ಪಂಕಜ್ ಮೋದಿ ಬಾಲವನಕ್ಕೆ ಭೇಟಿ ನೀಡಿ ಮನೆಯಲ್ಲಿದ್ದ ಉಪಯೋಗಕ್ಕೆ ಬಾರದ ಮರಗಳನ್ನು ಗುರುತು ಹಾಕಿ ಹೋಗಿದ್ದ ಬಳಿಕ ಕಾಮಗಾರಿಗೆ ವೇಗ ಸಿಕ್ಕಿತ್ತು.







