ಭತ್ತದ ಕನಿಷ್ಠ ಬೆಂಬಲ ದರ 60 ರೂ. ಏರಿಕೆ

ಹೊಸದಿಲ್ಲಿ, ಜೂ.1: ಕೇಂದ್ರ ಸರಕಾರವು ಬುಧವಾರ ಭತ್ತದ ಕನಿಷ್ಠ ಬೆಂಬಲ ದರ (ಎಂಎಸ್‌ಪಿ)ದಲ್ಲಿ ಕ್ವಿಂಟಾಲ್‌ಗೆ 60 ರೂ. ಏರಿಕೆ ಮಾಡಿದ್ದು, 1,470 ರೂ. ಗೆ ನಿಗದಿಪಡಿಸಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ)ಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. 2016-17ನೇ ಸಾಲಿನ ಖಾರಿಫ್ ಋತುವಿನಲ್ಲಿ ಧಾನ್ಯಗಳ ಮೇಲಿನ ಕನಿಷ್ಠ ಬೆಂಬಲ ದರದಲ್ಲಿ ಗಣನೀಯ ಏರಿಕೆ ಮಾಡಲೂ ಸಂಪುಟ ತನ್ನ ಅನುಮೋದನೆಯನ್ನು ನೀಡಿದೆ. ಕೇಂದ್ರ ಸರಕಾರವು 2015-16ನೇ ಸಾಲಿನ ಖಾರಿಫ್ (ಬೇಸಿಗೆ) ಋತುವಿನಲ್ಲಿ ಸಾಮಾನ್ಯ ದರ್ಜೆಯ ಭತ್ತಕ್ಕೆ 1410 ರೂ. ಹಾಗೂ ಎ ದರ್ಜೆಯ ಧಾನ್ಯಗಳ ಮೇಲಿನ ಕನಿಷ್ಠ ಬೆಂಬಲ ದರವನ್ನು ಪ್ರತಿ ಕ್ವಿಂಟಾಲ್‌ಗೆ 1450 ರೂ.ಗೆ ನಿಗದಿಪಡಿಸಿತ್ತು.
ಸರಕಾರವು ರೈತರಿಂದ ಖರೀದಿಸುವ ಧಾನ್ಯದ ಬೆಲೆಯನ್ನು ಕನಿಷ್ಠ ಬೆಂಬಲ ದರವೆಂದು ಹೇಳಲಾಗುತ್ತದೆ. 2016-17ನೇ ಖಾರಿಫ್ ಋತುವಿನಲ್ಲಿ ಭತ್ತದ ಕನಿಷ್ಠ ಬೆಂಬಲ ದರದಲ್ಲಿ ಪ್ರತಿ ಕ್ವಿಂಟಾಲ್‌ಗೆ 60 ರೂ. ಏರಿಕೆಗೆ ಸಿಸಿಐಎ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯ ದರ್ಜೆಯ ಭತ್ತ ಪ್ರತಿ ಕ್ವಿಂಟಾಲ್‌ಗೆ 1470 ರೂ.ಗೆ ಹಾಗೂ ಎ ದರ್ಜೆಯ ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 1510 ರೂ. ಏರಿಕೆ ಮಾಡಲಾಗಿದೆಯೆಂದು ಮೂಲಗಳು ತಿಳಿಸಿವೆ.ಆಂತರಿಕ ಉತ್ಪನ್ನವನ್ನು ಉತ್ತೇಜಿಸಲು ಹಾಗೂ ಧಾನ್ಯಬೆಳೆಗಳ ಆಮದಿನ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ 2016-17ನೆ ಖಾರಿಫ್ ಋತುವಿನಲ್ಲಿ ಕನಿಷ್ಠ ಬೆಂಬಲ ದರದಲ್ಲಿ ಗಣನೀಯವಾದ ಏರಿಕೆ ಮಾಡಲಾಗಿದೆಯೆಂದು ಸರಕಾರದ ಮೂಲಗಳು ತಿಳಿಸಿವೆ. ಹತ್ತಿಯ ಬೆಳೆಗೂ ಸಿಸಿಇಎ ಕನಿಷ್ಠ ಬೆಂಬಲ ದರದಲ್ಲಿ 60 ರೂ. ಏರಿಕೆ ಮಾಡಿದ್ದು, ಮೀಡಿಯಂ ಸ್ಟೇಪಲ್ ದರ್ಜೆಯ ಹತ್ತಿಗೆ ಪ್ರತಿಕ್ವಿಂಟಾಲ್‌ಗೆ 3860 ರೂ. ಹಾಗೂ ಲಾಂಗ್ ಸ್ಟೇಪಲ್ ದರ್ಜೆಯ ಹತ್ತಿಗೆ ಕ್ವಿಂಟಾಲ್‌ಗೆ 3860 ರೂ. ನಿಗದಿಪಡಿಸಿದೆ.





