ಅಲ್ಪಸಂಖ್ಯಾತರ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು, ಜೂ. 1: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ 2016-17ರ ಸಾಲಿಗೆ ಸ್ವಉದ್ಯೋಗಕ್ಕಾಗಿ ವಿವಿಧ ಯೋಜನೆಗಳಲ್ಲಿ ಅಲ್ಪಸಂಖ್ಯಾತ ವರ್ಗಗಳ ಹಾಗೂ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಶೇಖಡಾ 33ರಷ್ಟು ಮತ್ತು ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೆ ಶೇಕಡಾ 3ರಷ್ಟು ಆದ್ಯತೆ ಮೀಸಲಿರಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ.
ಅಲ್ಪಸಂಖ್ಯಾತರ (ಮುಸ್ಲಿಮ್, ಕ್ರಿಶ್ಚಿಯನ್, ಜೈನ್ಸ್, ಫಾರ್ಸಿ, ಸಿಖ್ಖರು, ಬೌದ್ಧ) ವರ್ಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರಕ್ಕೆ ರೂ. 81,000, ನಗರ ಪರಿಮಿತಿಗೆ ರೂ. 1,03,000 ಗಳನ್ನು ಮೀರಿರಬಾರದು. (ಅರಿವು ಸಾಲಕ್ಕೆ ಮಾತ್ರ ರೂ. 6,00,000 ಲಕ್ಷದ ಮಿತಿ ಇರುವುದು).
ಗೃಹಸಾಲದ ಮೇಲಿನ ಬಡ್ಡಿ ರಿಯಾಯತಿ ಸಹಾಯಧನ ಯೋಜನೆಯಲ್ಲಿ ವಾರ್ಷಿಕ ಆದಾಯದ ಮಿತಿ ಕ್ರಿಶ್ಚಿಯನ್ ಜನಾಂಗಕ್ಕೆ ರೂ. 1,50,000 ಮೀರಿರಬಾರದು), ವಯಸ್ಸು 18ರಿಂದ 55 ವರ್ಷಗಳ ಒಳಗಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷ ವಾಸವಿರಬೇಕು.
ಪಡಿತರ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ಕೊಟೇಶನ್, ಲೈಸನ್ಸ್, 3-ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು. ಅರ್ಜಿದಾರರು ತಮ್ಮ ವಿಳಾಸದ ದೃಢೀರಣಕ್ಕಾಗಿ ಆಧಾರ್ ಕಾರ್ಡ್ (ಯುಐಡಿ) ಪ್ರತಿಯನ್ನು ಲಗತ್ತಿಸಿ ಅದನ್ನು ಅವರ ಬ್ಯಾಂಕ್ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿರಬೇಕು.
ಯೋಜನೆಗಳು
1.ಸ್ವಾವಲಂಬನಾ ಸಬ್ಸಿಡಿ ಮತ್ತು ಮಾರ್ಜಿನ ಸಾಲ ಯೋಜನೆ
ಮತೀಯ ಅಲ್ಪಸಂಖ್ಯಾತ ಜನಾಂಗದವರು ಕೈಗೊಳ್ಳುವ ವ್ಯಾಪಾರ, ಸಣ್ಣ ಕೈಗಾರಿಕೆ, ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳು ಸೇವಾ ವಲಯದಲ್ಲಿ ಬರುವ ಚಟುವಟಿಕೆಗಳಿಗೆ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಗರಿಷ್ಠ 1 ಲಕ್ಷ ರೂ.ವರೆಗೆ ಆರ್ಥಿಕ ನೆರವು ಒದಗಿಸಲಾಗುವುದು. ನಿಗಮದಿಂದ ಗರಿಷ್ಠ 5,000 ರೂ. ಸಹಾಯಧನ ಹಾಗೂ ಶೇ.20ರಷ್ಟು ಮಾರ್ಜಿನ್ ಹಣವನ್ನು ಶೇ.6.ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಇದೇ ರೀತಿ ರೂ. 5 ಲಕ್ಷ್ಷದವರೆಗಿನ ಸಾಲಕ್ಕೆ ಸಹಾಯಧನ ಶೇ.5 ಭಾಗ ಮತ್ತು ಮಾರ್ಜಿನ್ ಸಾಲ ಶೇ. 20 ಭಾಗವನ್ನು ನಿಗಮದ ವತಿಯಿಂದ ನೀಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್‌ಗಳು ಭರಿಸುವುದು.
ಅರಿವು ಸಾಲ ಯೋಜನೆ
ಈ ಯೋಜನೆಯಲ್ಲಿ ಎಂ.ಬಿ.ಬಿ.ಎಸ್, ಎಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಪಿ.ಎಚ್.ಡಿ, ಎಂ.ಇ, ಎಂ.ಎಸ್ (ಎಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಡಿ.ಎಡ್, ಐ.ಟಿ.ಐ, ಡಿಪ್ಲೊಮಾ, ನರ್ಸಿಂಗ್, ಬಿ.ಡಿ.ಎಸ್, ಎಂ.ಫೆಡ್, ಎಂ.ಎ, ಬಿ.ಎಸ್ಸಿ (ಎಗ್ರಿ), ಪ್ಯಾರಾಮೆಡಿಕಲ್, ನರ್ಸಿಂಗ್, ಬಯೋಟೆಕ್) ಇತ್ಯಾದಿ ತಾಂತ್ರಿಕ ಮತ್ತು ವೃತ್ತಿಪರ ವಿದ್ಯಾಭ್ಯಾಸ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ ಅವರ ವ್ಯಾಸಂಗಕ್ಕೆ ಅವಶ್ಯಕತೆಗೆ ಅನುಗುಣವಾಗಿ ಕನಿಷ್ಠ ರೂ. 5,000ದಿಂದ ಗರಿಷ್ಠ ರೂ. 50,000 ವರೆಗೂ ಆಯಾಯ ಕೋರ್ಸ್‌ಗಳ ಅವಧಿಗೆ ಅನುಗುಣವಾಗಿ ಸಾಲ ಸೌಲಭ್ಯವನ್ನು ಶೇ.2ರ ಸೇವಾ ಶುಲ್ಕದಲ್ಲಿ ಒದಗಿಸಲಾಗುತ್ತದೆ. ಬಿ.ಇ, ಎಂ.ಬಿ.ಬಿ.ಎಸ್, ಬಿ.ಡಿಎಸ್, ಬಿ.ಯು.ಎಂ.ಎಸ್ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಿ.ಇ.ಟಿಯವರು ನಿಗದಿಪಡಿಸಿರುವ ಶುಲ್ಕದಂತೆ ಸಾಲವನ್ನು ಬಿಡುಗಡೆ ಮಾಡಲಾಗುತ್ತದೆ. ನೀಡಬೇಕಾದ ದಾಖಲಾತಿಗಳು - ನಿಗದಿತ ನಮೂನೆಯ ಅರ್ಜಿ, ಎಸೆಸೆಲ್ಸಿ ಅಂಕಪಟ್ಟಿಯ ನಕಲು, ವ್ಯಾಸಂಗ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪತ್ರ, ಜಾಮಿನುದಾರರ ದಾಖಲಾತಿಗಳು ಮತ್ತು ಇತರ.
3.ಶ್ರಮಶಕ್ತಿ ಸಾಲ ಯೋಜನೆ:
ಈ ಯೋಜನೆಯಲ್ಲಿ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಗ್ರಾಮೀಣ ಕುಶಲಕರ್ಮಿಗಳ ಹಾಗೂ ವೃತ್ತಿ ಕುಲ ಕಸುಬುದಾರರ ಕುಶಲತೆ ಮತ್ತು ಇದರ ಜೊತೆ ಎಲ್ಲಾ ಸಣ್ಣಪುಟ್ಟ ವೃತ್ತಿಯನ್ನು ಅವಲಂಬಿಸಿರುವ ಹಾಗೂ ನಿಗದಿ ಪಡಿಸಿದ ಕುಶಲಕರ್ಮಿ ವೃತ್ತಿ ಕಸುಬುಗಳ ಯೋಜನೆಗಳಿಗೆ ಗರಿಷ್ಠ 25,000ರೂ.ಗಳ ಸಾಲವನ್ನು ಶೇ. 4ರ ಬಡ್ಡಿದರದಲ್ಲಿ ನೀಡಲಾಗುವುದು. ಈ ಸಾಲದಲ್ಲಿ ಶೇ.25ರಷ್ಟು ಬ್ಯಾಕ್ ಎಂಡ್ ಸಬ್ಸಿಡಿ ಇರುತ್ತದೆ. ಈ ಸಾಲಕ್ಕೆ ಅರ್ಜಿದಾರರು ಜಾತಿ ಮತ್ತು ಆದಾಯ ಪತ್ರ, ಘಟಕದ ಲೈಸನ್ಸ್, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಅದನ್ನು ಅವರ ಬ್ಯಾಂಕ್ ಖಾತೆಗೆ ಹೊಂದಾಣಿಕೆ (ಲಿಂಕ್) ಮಾಡಿಕೊಂಡಿರಬೇಕು. ಈ ಯೋಜನೆಯಲ್ಲಿ ರೂ. 50,000 ಗಳ ಸಾಲಕ್ಕೆ ಘಟಕದ ಲೈಸನ್ಸ್, ಬಾಡಿಗೆ ಕರಾರು ಪತ್ರ, ಕೊಟೇಶನ್‌ಗಳಿರಬೇಕು. ಘಟಕವನ್ನು ಜಿಲ್ಲಾ ವ್ಯವಸ್ಥಾಪಕರು ಸ್ಥಳ ಪರಿಶೀಲಿಸಿದ ನಂತರ ಸಾಲಕ್ಕೆ ಆಯ್ಕೆ ಸಮಿತಿಗೆ ಶಿಫಾರಸು ಮಾಡುವ ಕ್ರಮ ಇರುತ್ತದೆ.
4.ಕಿರುಸಾಲ ಯೋಜನೆ
ಈ ಯೋಜನೆಯ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ಯಮೆದಾರರಿಗೆ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಸಹಾಯ ಸಂಘಗಳ ಮುಖಾಂತರ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಈ ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ ರೂ.5,000 ಸಹಾಯಧನ ಹಾಗೂ ರೂ. 5,000ಗಳ ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ನೀಡಲಾಗುವುದು.
5. ವೈಯಕ್ತಿಕ ಗಂಗಾಕಲ್ಯಾಣ ಯೋಜನೆ
ಈ ಯೋಜನೆಯಲ್ಲಿ ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತೀ ಸಣ್ಣ ರೈತರಾಗಿರುವ ಒಂದೇ ಕಡೆ ಕನಿಷ್ಠ 1 ಎಕ್ರೆ ಜಮೀನಿರುವ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಯ ಘಟಕ ವೆಚ್ಚ ಗರಿಷ್ಠ ರೂ. 1.50ಲಕ್ಷ ಆಗಿದ್ದು, ಒಂದು ಕೊಳವೆಬಾವಿ ಕೊರೆಸುವಿಕೆ, ಅಥವಾ ತೆರೆದ ಬಾವಿ ತೆಗೆದು ಪಂಪ್‌ಸೆಟ್ ಹಾಗೂ ಪೈಪ್‌ಲೈನ್ ಆಳವಡಿಸುವಿಕೆ ಒಳಗೊಂಡಿರುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನವಾಗಿರುತ್ತದೆ. ನೀಡಬೇಕಾದ ದಾಖಲಾತಿಗಳು - ನಿಗದಿತ ನಮೂನೆಯ ಅರ್ಜಿ, ಜಾತಿ ಮತ್ತು ಆದಾಯ ಪತ್ರ, ಆರ್.ಟಿ.ಸಿ. ಸಣ್ಣ ರೈತ ಸರ್ಟಿಫಿಕೇಟ್, ಇ.ಸಿ. ಸಂತತಿ ನಕ್ಷೆ, ನೀರಾವರಿ ಸೌಲಭ್ಯ ಇಲ್ಲವೆಂದು ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಣ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ ಇತ್ಯಾದಿ ಸಲ್ಲಿಸಬೇಕು.
6. ಗೃಹ ಸಾಲದ ಮೇಲಿನ ಬಡ್ಡಿ ರಿಯಾಯತಿ ಸಹಾಯಧನ ಯೋಜನೆ
ದಿನಾಂಕ 01-04-2007ರಿಂದ ಕ್ರಿಶ್ಚಿಯನ್ ಸಮುದಾಯದ ಜನಾಂಗದವರು ಮನೆ ನಿರ್ಮಾಣ ಮಾಡಲು ಪಡೆಯುವ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಇತರ ಅಂಗೀಕೃತ ಹಣಕಾಸು ಸಂಸ್ಥೆಗಳಿಂದ ಗರಿಷ್ಠ 5ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಪಡೆದ ಗೃಹ ಸಾಲಕ್ಕೆ ಗರಿಷ್ಠ 1ಲಕ್ಷ ರೂ. ಮೀರದಂತೆ ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಬಡ್ಡಿಯಲ್ಲಿ ರಿಯಾಯತಿ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
ಒಮ್ಮೆ ಸಾಲ ಪಡೆದ ಫಲಾನುಭವಿಗಳು ಪುನಃ ಸಾಲ ಪಡೆಯಲು ಅವಕಾಶ ಇರುವುದಿಲ್ಲ. ಒಂದು ಮನೆಯ ಒಬ್ಬರಿಗೆ ಮಾತ್ರ ಅವಕಾಶ. ಆಸಕ್ತ ಫಲಾಪೇಕ್ಷಿಗಳು ನಿಗದಿತ ಅರ್ಜಿಗಳನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಭವನ, ರೇಡಿಯೋ ಪಾರ್ಕ್, ಉರ್ವಾಸ್ಟೋರ್ಸ್, ಮಂಗಳೂರು ಇಲ್ಲಿಂದ ಪಡೆಯಬಹುದು.ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂರವಾಣಿ ಸಂಖ್ಯೆ 0824 - 2450044ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







