ಮುಂದುವರಿದ ರಜೆ ಮನವಿ ಸಲ್ಲಿಕೆ
ಒತ್ತಡಕ್ಕೆ ಮಣಿಯದ ಪೊಲೀಸರು
ಶಿವಮೊಗ್ಗ, ಜೂ.1: ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರವನ್ನು ಒತ್ತಾಯಿಸಿ, ರಾಜ್ಯಾದ್ಯಂತ ಜೂ.4ರಂದು ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಅಥವಾ ಕರ್ತವ್ಯ ಬಹಿಷ್ಕರಿಸುವ ಮೂಲಕ ಪರೋಕ್ಷ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಜಿಲ್ಲೆಯ ಹಲವು ಪೊಲೀಸರು ಗ
ಗುಂಪುಗುಂಪಾಗಿ ತಮ್ಮ ಹಿರಿಯ ಅಧಿಕಾರಿಗಳಿಗೆ ರಜೆ ಕೋರಿ ಮನವಿ ಪತ್ರ ಸಲ್ಲಿಸುತ್ತಿರುವ ಮಾಹಿತಿಗಳು ಬರುತ್ತಿವೆ. ಮತ್ತೊಂದೆಡೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾಮೂಹಿಕ ರಜೆ ಅಥವಾ ಕರ್ತವ್ಯ ಬಹಿಷ್ಕರಿಸದಂತೆ ಸಿಬ್ಬಂದಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಇದಕ್ಕೆ ಮಣಿಯದ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಾಮೂಹಿಕ ರಜೆ ಸಲ್ಲಿಸುವ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ಇಲಾಖೆಯ ಮೂಲಗಳು ಹೇಳುತ್ತವೆ. ಈಗಾಗಲೇ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ಪೊಲೀಸರು ಸಾಮೂಹಿಕ ರಜೆ ಮನವಿ ಪತ್ರವನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಶಿವಮೊಗ್ಗ ನಗರದ ಹಲವು ಪೊಲೀಸ್ ಠಾಣೆಗಳ ಪೊಲೀಸರು ಕೂಡ ಕಳೆದ ಕೆಲವು ದಿನಗಳಿಂದ ಸಾಮೂಹಿಕ ರಜೆ ಮನವಿ ಸಲ್ಲಿಸುವ ಕೆಲಸ ಮಾಡುತ್ತಿರುವ ಮಾಹಿತಿಗಳು ಬಂದಿವೆ. ‘ಜೂ. 4ರಂದು ಸಾಮೂಹಿಕ ರಜೆ ಹಾಕದಂತೆ ಹಾಗೂ ಕರ್ತ ವ್ಯಕ್ಕೆ ಗೈರು ಹಾಜರಾಗದಂತೆ ಹಿರಿಯ ಅಧಿಕಾರಿಗಳು ಒತ್ತಡ ಹಾಕುತ್ತಿರುವುದು ನಿಜವಾಗಿದೆ. ಜೊತೆಗೆ ಶಿಸ್ತುಕ್ರಮದ ಪರೋಕ್ಷ ಎಚ್ಚರಿಕೆಯನ್ನು ನೀಡು ತ್ತಿದ್ದಾರೆ. ಇದರಿಂದ ಕೆಲ ಸಿಬ್ಬಂದಿ ಗೊಂದ ಲಕ್ಕೀಡಾಗಿರುವುದು ಸತ್ಯವಾಗಿದೆ. ಆದರೆ ಮತ್ತೆ ಕೆಲ ಸಿಬ್ಬಂದಿ ಮಾತ್ರ ಗುಂಪು ಗುಂಪಾಗಿ ತಮ್ಮ ಹಿರಿಯ ಅಧಿಕಾರಿ ಗಳಿಗೆ ಸಾಮೂಹಿಕ ರಜೆಯ ಮನವಿ ಸಲ್ಲಿಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಸಿಬ್ಬಂದಿ ಯೋರ್ವರು ಹೇಳುತ್ತಾರೆ. ಮನವೊಲಿಕೆ ಯತ್ನ: ಮತ್ತೊಂದೆಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಭೆೇಟಿನೀಡಿ ಸಿಬ್ಬಂದಿಯ ಮನವೊಲಿಸುವ ಯತ್ನ ನಡೆಸುತ್ತಿರುವ ಮಾಹಿತಿಗಳು ಕೇಳಿ ಬಂದಿವೆ. ಸಿಬ್ಬಂದಿಯ ಸಭೆ ನಡೆಸಿ ಯಾವುದೇ ಕಾರಣಕ್ಕೂ ಕರ್ತವ್ಯ ಬಹಿಷ್ಕರಿಸಬೇಡಿ. ಪ್ರತಿಭಟನೆಗಿಳಿಯಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆನ್ನಲಾಗಿದೆ. ಆದರೆ ಈ ವೇಳೆ ಕೆಲ ಸಿಬ್ಬಂದಿ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನೇರವಾಗಿಯೇ ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಯಾವುದೇ ಕ್ರಮಕೈಗೊಂಡರೂ ಎದುರಿಸಲು ಸಿದ್ಧರಿದ್ದೇವೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬದಲಾದ ಹಿರಿಯ ಅಧಿಕಾರಿಗಳ ವರ್ತನೆ
ಕೆ
ಲ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಕೆಳ ಹಂತದ ಸಿಬ್ಬಂದಿಯನ್ನು ಗೌರವಾ ಧಾರಗಳಿಂದ ಕಾಣುವುದಿಲ್ಲವೆಂಬ ಆರೋಪ ಸರ್ವೇಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಪೊಲೀಸ್ ಸಿಬ್ಬಂದಿ ಸಾಮೂಹಿಕ ರಜೆ ಅಥವಾ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪರೋಕ್ಷ ಪ್ರತಿಭಟನೆಗಿಳಿಯಲು ನಿರ್ಧರಿಸಿದ ನಂತರ ಸಿಬ್ಬಂದಿಯ ಬಗ್ಗೆ ಹಿರಿಯ ಅಧಿಕಾರಿಗಳ ವರ್ತನೆಯಲ್ಲಿ ಗುರುತರ ಬದಲಾವಣೆಯಾಗಿದೆ ಎಂಬ ಮಾತನ್ನು ಸ್ವತಃ ಸಿಬ್ಬಂದಿಯೇ ಹೇಳುತ್ತಾರೆ. ಕೆಳ ಹಂತದ ಸಿಬ್ಬಂದಿ ಜೂ. 4ರಂದು ಕರ್ತವ್ಯಕ್ಕೆ ಗೈರು ಹಾಜರಾಗದಂತೆ ನೋಡಿಕೊಳ್ಳಿ. ಅವರ ಮನವೊಲಿಸುವ ಕೆಲಸ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಅವರ ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಅಧಿಕಾರಿಗಳು ತಮ್ಮ ಕೆಳ ಹಂತದ ಸಿಬ್ಬಂದಿಯ ಮನವೊಲಿಕೆಯ ಕೆಲಸ ಮಾಡುತ್ತಿದ್ದಾರೆ. ಸಾಮೂಹಿಕ ರಜೆ ಕೋರಿ ಮನವಿ ಸಲ್ಲಿಸದಂತೆ ಕೋರಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಾಟ್ಸ್‌ಆ್ಯಪ್, ಫೆೇಸ್‌ಬುಕ್‌ಗಳಲ್ಲಿ ಸಂದೇಶಗಳ ಸುರಿಮಳೆ
ಸಾಮಾಜಿಕ ಸಂಪರ್ಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೆೇಸ್‌ಬುಕ್, ಟ್ವಿಟರ್‌ಗಳಲ್ಲಿ ಜೂ. 4ರಂದು ಪೊಲೀಸ್ ಸಿಬ್ಬಂದಿ ನಡೆಸುತ್ತಿರುವ ಪರೋಕ್ಷ ಪ್ರತಿಭಟನೆಯ ಬಗ್ಗೆ ಸಂದೇಶಗಳ ಮಹಾಪೂರವೇ ಹರಿದಾಡುತ್ತಿದೆ. ಪರ-ವಿರುದ್ಧದ ಚರ್ಚೆಗಳು ಭಾರೀ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಸಾಮಾಜಿಕ ಜಾಲತಾಣಿಗರು ಪೊಲೀಸರ ಮುಷ್ಕರಕ್ಕೆ ಭಾರೀ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.
ಮುಷ್ಕರಕ್ಕೆ ಮಾನವ ಹಕ್ಕು ಸಮಿತಿಯ ಬೆಂಬಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊಲೀಸ್ ಸಿಬ್ಬಂದಿ ಜೂ. 4 ರಂದು ಕೈಗೊಂಡಿರುವ ಮುಷ್ಕರಕ್ಕೆ ಭಾರತೀಯ ಮಾನವ ಹಕ್ಕುಗಳ ಸಮಿತಿ ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ. ಬುಧವಾರ ಪೊಲೀಸರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮಿತಿಯ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪೊಲೀಸರಿಗೆ ಮೂಲ ಸೌಲಭ್ಯ ಒದಗಿಸದೆ ಸೇವಕರಂತೆ ದುಡಿಸಿಕೊಳ್ಳಲಾಗುತ್ತಿದೆ. ನ್ಯಾಯಯುತ ಸೌಲಭ್ಯಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಜೂ. 4ರಂದು ಪೊಲೀಸರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುವ ಸಂಭವ ಹೆಚ್ಚಾಗಿದೆ ಎಂದು ಸಂಘಟನೆಯು ಆತಂಕ ವ್ಯಕ್ತಪಡಿಸಿದೆ.
ಇತರೇ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೆರೆಯ ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಲಿಕೆ ಮಾಡಿದಾಗ, ರಾಜ್ಯದ ಪೊಲೀಸರಿಗೆ ವೇತನ ಕಡಿಮೆಯಾಗಿದೆ. ಬೇರೆ ರಾಜ್ಯಗಳಲ್ಲಿ ನೀಡುತ್ತಿರುವಂತೆಯೇ ಇಲ್ಲಿಯೂ ವೇತನ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಜನಸಾಮಾನ್ಯರ ದೂರು, ದುಮ್ಮಾನಗಳಿಗೆ, ಸಾರ್ವಜನಿಕರ ಕುಂದುಕೊರತೆ, ಶಾಂತಿ ಸುವ್ಯವಸ್ಥೆ ಸೇರಿದಂತೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿರುವುದು ಖಂಡನಾರ್ಹವಾಗಿದ್ದು, ಸಮಾಜದಲ್ಲಿ ಪೊಲೀಸರು ಇಲ್ಲದೇ ಇರುವುದನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಅವರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದ್ದಾರೆ. ‘ಇತರ ರಾಜ್ಯಗಳಂತೆ ಸೌಲಭ್ಯ ಕಲ್ಪಿಸಲಿ’
ಸೊರಬ, ಜೂ. 1: ಸಮಾಜದ ಸ್ವಾಸ್ಥ ಹಾಗೂ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳಲು ಹಗಲಿರುಳು ಶ್ರಮಿಸುತ್ತಿರುವ ರಾಜ್ಯ ಪೊಲೀಸ್ ಸಿಬ್ಬಂದಿಗೆ ನೆರೆಯ ರಾಜ್ಯಗಳಂತೆ ಸೌಲಭ್ಯಗಳನ್ನು ರಾಜ್ಯ ಸರಕಾರ ಕಲ್ಪಿಸಬೇಕು ಎಂದು ದಲಿತ-ಹಿಂದುಳಿದ-ಅಲ್ಪಸಂಖ್ಯಾತ ಹಾಗೂ ಮಹಿಳಾ ಒಕ್ಕೂಟದ ತಾಲೂಕು ಸಂಚಾಲಕ ರಾಜಪ್ಪಮಾಸ್ತರ್ ಆಗ್ರಹಿಸಿದ್ದಾರೆ. ಸಮಾಜದ ಎಲ್ಲ ವರ್ಗಗಳ ಜನತೆಯ ಮಾನ, ಪ್ರಾಣ, ಆಸ್ತಿ ರಕ್ಷಣೆಯ ಜವಾಬ್ದಾರಿ ಹೊತ್ತು ಹಗಲಿರುಳು ಎನ್ನದೆ ಕಾರ್ಯನಿರ್ವಹಿಸಿರುತ್ತಿರುವ ಪೊಲೀಸ್ ಸಿಬ್ಬಂದಿ ತಮ್ಮ ಸಂಕಷ್ಟಗಳನ್ನು ಸರಕಾರದ ಗಮನಕ್ಕೆ ತರಲು ಜೂನ್ 4ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವ ಅನಿವಾರ್ಯ ಸಂಗತಿ ಸೃಷ್ಟಿಯಾಗಿರುವುದು ಆತಂಕಕಾರಿಯಾಗಿದೆ. ಇಲಾಖೆಯಲ್ಲಿ ಆಂತರಿಕ ಶಿಸ್ತು ಅಗತ್ಯವಾಗಿದೆ. ಆದರೆ, ಇದನ್ನು ಅಂತಃಕರಣ ಮತ್ತು ಮಾನವೀಯ ನೆಲೆಯಲ್ಲಿ ಪರಿಗಣಿಸಿ ನೆರೆ ರಾಜ್ಯಗಳಲ್ಲಿ ಇರುವಂತೆ ವೇತನ, ರಜೆ, ವಸತಿ ಇತರೆ ಭತ್ತೆಗಳನ್ನು ನೀಡಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿದೆ. ಪೊಲೀಸ್ ಸಿಬ್ಬಂದಿಯನ್ನು ಅನಿವಾರ್ಯವಾಗಿ ಚಳವಳಿಗೆ ನೂಕ
ೇ, ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸ್ ಸಿಬ್ಬಂದಿಯಿಂದ ಸೇವೆಯನ್ನು ಪಡೆಯುತ್ತಿರುವ ನಾಗರಿಕ ಸಮಾಜವು ಸಹ ಅವರ ಸಮಸ್ಯೆಗಳ ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತಿಸಿ, ಪೊಲೀಸರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಸರಕಾರದ ಗಮನ ಸೆಳೆಯಲು ಮುಂದಾಗಬೇಕಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







