ಸೊರಬ: ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಸೊರಬ, ಜೂ.1: ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹಿರಿಯ ವಕೀಲ ಎಂ. ನಾಗಪ್ಪ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ತಂಬಾಕು ಸೇವನೆ ಮಾಡಲು ಹಲವಾರು ವಿಧಾನಗಳನ್ನು ಬಳಸುತ್ತಾರೆ. ಬೀಡಿ, ಸಿಗರೇಟು, ಗುಟ್ಕಾ, ಜರ್ದಾ ಇತ್ಯಾದಿ ವಿಧಾನಗಳಾಗಿದ್ದು, ಮಹಿಳೆಯರು ಇದರ ಬಳಕೆ ಮಾಡುವುದರಿಂದ ಅವರ ಹಾಗೂ ಮಗುವಿಗೆ ಹೆಚ್ಚಿನ ತೊಂದರೆಯಾಗಲಿದೆ. ಮಗು ಹುಟ್ಟುತ್ತಲೆ ರೋಗಪೀಡಿತವಾಗಿ ಹುಟ್ಟುವ ಸಾಧ್ಯತೆ ಇರುತ್ತದೆ ಅಥವಾ ಬಂಜೆತನವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಕೀಲ ವೈ.ಜಿ. ಪುಟ್ಟಸ್ವಾಮಿ ಮಾತನಾಡಿ, ವ್ಯಕ್ತಿಯೋರ್ವ ತಂಬಾಕು ಸೇವನೆ ಮಾಡದೆ ಇದ್ದರೂ ಧೂಮಪಾನಿಗಳ ನಡುವೆ ಇದ್ದರೆ ಅವರಷ್ಟೇ ತೊಂದರೆ ಉಂಟಾಗುತ್ತದೆ ಎಂದರು. ಹಿರಿಯ ವ್ಯವಹಾರ ನ್ಯಾಯಾಧೀಶ ಮತ್ತು ಪ್ರ.ದ.ನ್ಯಾ. ದಂಡಾಧಿಕಾರಿಗಳು ಹಾಗೂ ತಾಲೂಕು ಸೇವಾ ಸಮಿತಿ ಅಧ್ಯಕ್ಷ ಉಷಾರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಸೋಮಸುಂದರ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವ್ಯವಹಾರ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್, ಸಹಾಯಕ ಅಭಿಯೋಜಕ ಸಂಜಯ್ ಜೋಯ್ಸಿ, ವಕೀಲರ ಸಂಘದ ಕಾರ್ಯದರ್ಶಿ ರಾಮಪ್ಪ, ಸಿ. ಶಿವಕುಮಾರ್, ಎಂ.ಆರ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.





